ಹೈದರಾಬಾದಿನ ಮೋತಿ ನಗರದ ಪ್ರಮೀಳಾ ಮತ್ತು ಪವಿತ್ರಾಗೆ ಇನ್ನೂ ಹುಡುಗಾಟದ ವಯಸ್ಸು. ಒಬ್ಬಳಿಗೆ 15 ಮತ್ತೊಬ್ಬಳಿಗೆ 13 ಮಾತ್ರ. ಆದರೆ ಕೊರೊನಾ ಸಂಕಷ್ಟದಲ್ಲಿ ಅವರ ತಂದೆ ರಾಮ್ ದಾಸ್ ನಾಯಕ್ ಅವರಿಗೆ ಎದುರಾದ ದಿನಪತ್ರಿಕೆ ವಿತರಣೆ ಸಂಕಷ್ಟಕ್ಕೆ ಸೋದರಿಯರು ಸವಾಲೊಡ್ಡಿ ಪರಿಹರಿಸಿದ್ದಾರೆ.
ನಾಯಕ್ ಅವರು ಕಳೆದ ವರ್ಷ ಲಾಕ್‌ಡೌನ್ ವೇಳೆಯಿಂದ ಪತ್ರಿಕೆ ವಿತರಣೆಗೆ ಯುವಕರ ಕೊರತೆ ಎದುರಿಸುತ್ತಿದ್ದಾರೆ. ಮನೆಮನೆಗೆ ಭೇಟಿ ನೀಡಿದಾಗ ಕೊರೊನಾ ತಗುಲುವ ಭಯದಿಂದ ಯುವಕರು ಪತ್ರಿಕೆ ವಿತರಣೆಗೆ ಮುಂದಾಗುತ್ತಿಲ್ಲ.
ಈ ಸವಾಲಿಗೆ ಸೆಡ್ಡು ಹೊಡೆದ ಪ್ರಮೀಳಾ-ಪವಿತ್ರಾ ಸೋದರಿಯರು ಮುಂಜಾನೆ 5 ಗಂಟೆಗೆ ಎದ್ದು, 8 ಗಂಟೆವರೆಗೆ ದ್ವಿಚಕ್ರ ವಾಹನ ಏರಿಕೊಂಡು ತಂದೆಯು ತಿಳಿಸಿದ ಮನೆಗಳಿಗೆಲ್ಲ ದಿನಪತ್ರಿಕೆಗಳನ್ನು ಹಂಚುತ್ತಿದ್ದಾರೆ. ಒಂದು ದಿನಕ್ಕೆ 300ಕ್ಕೂ ಅಧಿಕ ದಿನಪತ್ರಿಕೆಗಳನ್ನು ಮನೆಬಾಗಿಲಿಗೇ ಸೋದರಿಯರು ಹಾಕುತ್ತಿದ್ದಾರೆ.
ಅಂದಹಾಗೇ, ಈ ಸೋದರಿಯರಿಗೆ ಜೀವನದಲ್ಲಿ ಮುಂದೆ ಪೊಲೀಸ್ ಇಲಾಖೆ ಸೇರುವ ಕನಸಿದೆ. ದಿನಪತ್ರಿಕೆ ವಿತರಿಸಲು ತೆರಳಿದಾಗ ಅನೇಕ ಜನರು, ಸೋದರಿಯರ ಶ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವಲ್ಪ ಪ್ರೋತ್ಸಾಹ ಧನ ನೀಡಿದ್ದಾರೆ. ಮತ್ತೆ ಕೆಲವರು ಸಿಹಿ ನೀಡಿ ಬೆನ್ನು ತಟ್ಟಿದ್ದಾರೆ ಕೂಡ.
BREAKING: ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಇಂದು ವಿಚಾರಣೆಗೆ ಹಾಜರು
ಒಮ್ಮೆ ಒಬ್ಬ ಗ್ರಾಹಕರ ಮನೆಗೆ ಪತ್ರಿಕೆ ಹಾಕಿ ಮರಳುತ್ತಿದ್ದಾಗ , ಅವರು ’’ ಸೋದರಿಯೇ ನೀವೊಂದು ದಿನ ಮಾಜಿ ರಾಷ್ಟ್ರಪತಿ ಹಾಗೂ ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರಂತೆ ಮಿಂಚುತ್ತೀರಿ’’ ಎಂದರಂತೆ. ಆ ಕ್ಷಣವನ್ನು ಮರೆಯಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಸೋದರಿಯರು.