ಮಹಿಳೆಯರಿಗೆ ರಕ್ಷಣೆ ಸಿಗಲಿ ಎಂಬ ಕಾರಣಕ್ಕೆ ಕಾನೂನಿನ ಅಡಿಯಲ್ಲಿ ಸಾಕಷ್ಟು ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ಆದರೆ ತೆಲಂಗಾಣದ ಹೈದರಾಬಾದ್ನಲ್ಲಿ ಮಹಿಳೆಯೊಬ್ಬಳು ಕ್ಷುಲ್ಲಕ ಕಾರಣಕ್ಕೆ ತನ್ನ ನೆರೆಹೊರೆಯವರು ಹಾಗೂ ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರದ ಸುಳ್ಳು ದೂರನ್ನು ನೀಡಿದ್ದಾಳೆ.
ನೆರೆಹೊರೆಯವರು 10 ಸಾವಿರ ರೂಪಾಯಿ ನೀಡಲು ನಿರಾಕರಿಸಿದರು ಎಂಬ ಕಾರಣಕ್ಕೆ ಕೋಪಗೊಂಡ ಮಹಿಳೆ ಈ ರೀತಿ ಸುಳ್ಳು ದೂರು ನೀಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಗೊಲ್ಕಂಡಾ ಏರಿಯಾದ ನಿವಾಸಿಯಾದ ವಿಚ್ಚೇದಿತ ಮಹಿಳೆ ಮನೆಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಎರಡು ದಿನಗಳ ಹಿಂದೆ ಗೊಲ್ಕಂಡಾ ಪೊಲೀಸ್ ಠಾಣೆಗೆ ತೆರಳಿದ್ದ ಮಹಿಳೆಯು ದಿನಸಿ ಅಂಗಡಿ ವ್ಯಾಪಾರಿ ಹಾಗೂ ಆತನ ಇಬ್ಬರು ಸ್ನೇಹಿತರ ವಿರುದ್ಧ ಸಾಮೂಹಿಕ ಅತ್ಯಾಚಾರದ ಆರೋಪ ಹೊರಿಸಿದ್ದಳು. ಒಂದು ತಿಂಗಳ ಹಿಂದೆ ಬಾಡಿಗೆ ಮನೆ ತೋರಿಸುವ ನೆಪದಲ್ಲಿ ನನ್ನನ್ನು ಕಾರಿನಲ್ಲಿ ಕರೆದುಕೊಂಡು ಹೋದ ಮೂವರು ಸಾಮೂಹಿಕ ಅತ್ಯಾಚಾರವೆಸಗಿದ್ದರು ಎಂದು ದೂರನ್ನು ನೀಡಿದ್ದಳು.
ಈ ಘಟನೆ ಬಳಿಕ ನನಗೆ ಬಂದೂಕು ಹಿಡಿದು ಬೆದರಿಕೆ ಹಾಕಲಾಗಿತ್ತು. ನೆರೆಹೊರೆಯವರನ್ನು ಯಾರನ್ನೂ ಭೇಟಿ ಮಾಡದಂತೆ ನನಗೆ ಆವಾಜ್ ಹಾಕಿದ್ದರು. ಹೀಗಾಗಿ ನಾನು 1 ತಿಂಗಳುಗಳ ಕಾಲ ಮನೆಯ ಒಳಗೆ ಬಂಧಿಯಾಗಿದ್ದೆ. ನನ್ನ ಅಶ್ಲೀಲ ಫೋಟೋ ಕ್ಲಿಕ್ಕಿಸಿಕೊಂಡಿದ್ದ ಅವರು ಅದನ್ನು ಹರಿಬಿಡೋದಾಗಿ ಬೆದರಿಕೆಯೊಡ್ಡಿದ್ದರು ಎಂದೂ ಪೊಲೀಸರ ಮುಂದೆ ಹೇಳಿದ್ದಳು. ಮಹಿಳೆಯ ದೂರನ್ನು ಆಲಿಸಿದ ಪೊಲೀಸರು ಸಾಮೂಹಿಕ ಅತ್ಯಾಚಾರದ ಪ್ರಕರಣವನ್ನು ದಾಖಲಿಸಿಕೊಂಡಿದ್ದರು. ಹಾಗೂ ಮಹಿಳೆಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿದ್ದರು.
ಆದರೆ ಭಾನುವಾರ ಪೊಲೀಸ್ ಠಾಣೆಗೆ ಬಂದ ಮಹಿಳೆ ತಾನು ಸುಳ್ಳು ದೂರು ನೀಡಿದ್ದೇನೆ ಎಂದು ಹೇಳಿದ್ದು ಇದನ್ನು ಕೇಳಿದ ಪೊಲೀಸರು ಶಾಕ್ ಆಗಿದ್ದಾರೆ. ಚಿಕಿತ್ಸೆಗೆ 10 ಸಾವಿರ ರೂಪಾಯಿ ಸಾಲ ನೀಡುವಂತೆ ನಾನು ಅವರೆಲ್ಲರ ಬಳಿ ಕೇಳಿಕೊಂಡಿದ್ದೆ. ಆದರೆ ಯಾರೊಬ್ಬರೂ ನನಗೆ ಸಾಲ ನೀಡಲಿಲ್ಲ. ಇದರಿಂದ ಕೋಪಗೊಂಡಿದ್ದ ನಾನು ಸೇಡು ತೀರಿಸಿಕೊಳ್ಳಬೇಕೆಂದು ಈ ರೀತಿ ಸುಳ್ಳು ದೂರು ನೀಡಿದ್ದೆ ಎಂದು ಹೇಳಿದ್ದಾಳೆ.