ಹೈದರಾಬಾದ್: ದೋಸೆಗಳಲ್ಲಿ ಹಲವಾರು ವೆರೈಟಿಗಳನ್ನು ನೀವು ನೋಡಿರಬಹುದು. ಆದರೆ ಚಿನ್ನದ ದೋಸೆ ನೋಡಿದ್ದೀರಾ? ಚಿನ್ನದಿಂದ ಮಾಡಿದ ಮೇಲೆ ಅದನ್ನು ತಿನ್ನಲು ಸಾಧ್ಯವಿಲ್ಲ ಎಂದುಕೊಳ್ಳಬೇಡಿ. ಇದು ಚಿನ್ನ ಲೇಪಿತ ದೋಸೆ ಅರ್ಥಾತ್ ನಿಜವಾಗಿಯೂ ತಿನ್ನಬಹುದಾದ ದೋಸೆ.
ತೆಲಂಗಾಣದ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ಹೌಸ್ ಆಫ್ ದೋಸಾಸ್ ಹೆಸರಿನ ರೆಸ್ಟೋರೆಂಟ್ನಲ್ಲಿ ಇದು ಲಭ್ಯವಿದೆ. ದೋಸೆಯನ್ನು 24 ಕ್ಯಾರೆಟ್ ಚಿನ್ನದಿಂದ ತಯಾರು ಮಾಡಲಾಗುತ್ತದೆ. ಇದರ ಬೆಲೆ ಒಂದು ಸಾವಿರ ರೂಪಾಯಿ.
ಈ ದೋಸೆಯನ್ನು ತಯಾರಿಸುವ ರೀತಿಯೂ ತುಂಬಾ ವಿಶಿಷ್ಟವಾಗಿದೆ. ದೋಸೆಯ ಮೇಲೆ ತುಪ್ಪದಂತೆ ಶುದ್ಧ ಚಿನ್ನವನ್ನು ಲೇಪಿಸಲಾಗುತ್ತದೆ. ಚಿನ್ನ ಲೇಪಿತ ದೋಸೆಯನ್ನು ಹುರಿದ ಗೋಡಂಬಿ, ಬಾದಾಮಿ, ಶುದ್ಧ ತುಪ್ಪ, ಹುರಿದ ಕಡಲೆಕಾಯಿ ಮತ್ತು ಹುರಿದ ಚನ್ನಾ ದಾಲ್‌ನಿಂದ ಮಾಡಿದ ಚಟ್ನಿಗಳ ಜೊತೆ ಸರ್ವ್ ಮಾಡಲಾಗುತ್ತದೆ.
ದೋಸೆ ದುಬಾರಿಯಾಗಿದ್ದರೂ, ಗ್ರಾಹಕರು ಚಿನ್ನದ ಲೇಪಿತ ದೋಸೆಯನ್ನು ಒಮ್ಮೆಯಾದರೂ ತಿನ್ನಬೇಕು ಎಂದು ಹಾತೊರೆಯುತ್ತಾರೆ. ಈ ರೆಸ್ಟೋರೆಂಟ್ ದಿನಕ್ಕೆ ಕನಿಷ್ಠ ಆರರಿಂದ ಎಂಟು ದೋಸೆಗಳನ್ನು ಮಾರಾಟ ಮಾಡುತ್ತದೆ ಎಂದು ತಿಳಿದುಬಂದಿದೆ.