ಹೈದರಾಬಾದ್ನಲ್ಲಿ ಆರು ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿ ಕೊಲೆಗೈದಿದ್ದ ಆರೋಪಿಯು ವಾರಂಗಲ್ ರೈಲ್ವೆ ಹಳಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಅಪ್ರಾಪ್ತ ಬಾಲಕಿಯ ಅತ್ಯಾಚಾರ ಪ್ರಕರಣದಲ್ಲಿ ಪೊಲೀಸರಿಗೆ ಆರೋಪಿಯನ್ನು ಎನ್ಕೌಂಟರ್ ಮಾಡಲು ಅನುಮತಿ ನೀಡಿದ ಬೆನ್ನಲ್ಲೇ ಕಾಮುಕನ ಮೃತದೇಹ ಪತ್ತೆಯಾಗಿದೆ.
ಪ್ರಕರಣದ ವಿಚಾರವಾಗಿ ಮಂಗಳವಾರ ಮಾತನಾಡಿದ ತೆಲಂಗಾಣದ ಕಾರ್ಮಿಕ ಸಚಿವ ಮಲ್ಲಾ ರೆಡ್ಡಿ ಹೈದರಾಬಾದ್ ಅತ್ಯಾಚಾರ ಆರೋಪಿಯನ್ನು ಎನ್ಕೌಂಟರ್ ಮೂಲಕ ಕೊಲ್ಲಲಾಗುವುದು ಎಂದು ಹೇಳಿದ್ದರು.
ಪ್ರಕರಣವನ್ನು ಬೇಧಿಸಲು 15 ಪೊಲೀಸರ ತಂಡವನ್ನು ರಚಿಸಲಾಗಿದ್ದು ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶಗಳಿಗೆ ಕಳುಹಿಸಿಕೊಡಲಾಗಿತ್ತು.
ಸಿಂಗರೇಣಿ ಕಾಲೋನಿಯಲ್ಲಿ ಅಪ್ರಾಪ್ತೆಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಆರೋಪಿಯು ಮೃತಪಟ್ಟಿದ್ದಾನೆ ಎಂದು ತೆಲಂಗಾಣ ಡಿಜಿಪಿ ಅಧಿಕೃತ ಮಾಹಿತಿ ನೀಡಿದ್ದಾರೆ.
ಅತ್ಯಾಚಾರ ಆರೋಪಿಯ ಮೃತದೇಹವು ಗುರುವಾರ ವಾರಂಗಲ್ನ ಘನಪುರ ನಿಲ್ದಾಣದ ಬಳಿ ರೈಲ್ವೆ ಹಳಿಯಲ್ಲಿ ಪತ್ತೆಯಾಗಿತ್ತು. ಮೃತದೇಹದ ಮೇಲಿನ ಗುರುತನ್ನು ಆಧರಿಸಿ ಅದು ಆರೋಪಿಯದ್ದೇ ಮೃತದೇಹ ಎಂದು ದೃಢೀಕರಿಸಲಾಗಿದೆ ಎಂದು ಡಿಜಿಪಿ ಹೇಳಿದ್ದಾರೆ.
ಆರೋಪಿಯ ಕೈಯಲ್ಲಿ ಇರುವ ಟ್ಯಾಟೂವನ್ನು ಪೊಲೀಸರು ಗುರುತಿಸಿದ್ದಾರೆ. ಮೃತದೇಹದ ಕೈಯಲ್ಲೂ ಅದೇ ಟ್ಯಾಟೂ ಕಂಡುಬಂದಿದೆ. ಆದಾಗ್ಯೂ ಡಿಎನ್ಎ ಹಾಗೂ ವೈಜ್ಞಾನಿಕ ಪರೀಕ್ಷೆಗಳ ಬಳಿಕ ಈ ಬಗ್ಗೆ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ಹೈದರಾಬಾದ್ ಸಿಪಿ ಅಂಜನಿಕುಮಾರ್ ಹೇಳಿದ್ದಾರೆ.
ಈ ನಡುವೆ ತೆಲಂಗಾಣ ಸಚಿವರಾದ ಮೊಹಮ್ಮದ್ ಮಹಮೂದ್ ಅಲಿ ಹಾಗೂ ಸತ್ಯವತಿ ರಾಥೋಡ್ ಮೃತ ಬಾಲಕಿಯ ಪೋಷಕರನ್ನು ಭೇಟಿಯಾಗಿದ್ದು 20 ಲಕ್ಷ ರೂಪಾಯಿ ಪರಿಹಾರ ಧನವನ್ನು ಘೋಷಿಸಿದ್ದಾರೆ.