
ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ಕಟ್ಟಿಟ್ಟ ಬುತ್ತಿ. ಒಂದು ವೇಳೆ ದಂಡ ಕಟ್ಟದಿದ್ದರೆ ಒಂದು ಸಂದರ್ಭದಲ್ಲಿ ವಾಹನ ಜಪ್ತಿಯಾಗುವ ಪರಿಸ್ಥಿತಿ ಸೃಷ್ಟಿಯಾಗಬಹುದು. ಪೊಲೀಸ್ ಇಲಾಖೆ ದಂಡ ವಸೂಲಿ ಮಾಡದೇ ಬಿಡುವುದಿಲ್ಲಾ ಅನ್ನೋ ಮಾತು ಕೂಡ ಕಾಮನ್, ಆದ್ರೆ ಹೈದರಾಬಾದ್ ಪೊಲೀಸರು ಇದಕ್ಕೆ ತದ್ವಿರುದ್ಧವಾಗಿ ನಡೆದುಕೊಂಡು ನಾಗರಿಕರಿಗೆ ಭಾರೀ ಆಫರ್ ನೀಡಿದ್ದಾರೆ.
ಟ್ರಾಫಿಕ್ ನಿಯಮ ಉಲ್ಲಂಘಿಸಿದವರಿಗೆ ಈಗಾಗಲೇ ನೀಡಲಾಗಿರುವ ಚಲನ್‌ನ ಮೊತ್ತದಲ್ಲಿ ಸಾಕಷ್ಟು ರಿಯಾಯಿತಿಯೊಂದಿಗೆ ದಂಡದ ಮೊತ್ತವನ್ನು ಕಟ್ಟುವ ಸ್ಕೀಮ್ ನೀಡಲಾಗಿದೆ. ಬುಧವಾರ ಹೈದರಾಬಾದ್ ಟ್ರಾಫಿಕ್ ಪೊಲೀಸ್ ಪ್ರಕಟಣೆಯ ಮೂಲಕ ಇದನ್ನು ತಿಳಿಸಿದೆ.
ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ನಾಗರಿಕರು ಆರ್ಥಿಕ ಸಂಕಷ್ಟಗಳನ್ನು ಎದುರಿಸುತ್ತಿರುವ ಕಾರಣ ‘ಮಾನವೀಯ ಸೂಚಕ’ವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸಂಚಾರ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಮೂಲಗಳ ಪ್ರಕಾರ, 85 ಪ್ರತಿಶತ ಚಲನ್‌ಗಳು ಸಮಾಜದ ಮಧ್ಯಮ ಮತ್ತು ಕೆಳ ವರ್ಗಕ್ಕೆ ಸೇರಿದ ದ್ವಿಚಕ್ರ ವಾಹನ ಚಾಲಕರಿಗೆ ಸಂಬಂಧಿಸಿದೆ. ಹೀಗಾಗಿ ಅವರಿಗೆ ಹೆಚ್ಚಿನ ಹೊರೆಯಾಗಬಾರದು ಎಂಬ ಕಾರಣಕ್ಕೆ ಪೊಲೀಸ್ ಇಲಾಖೆ ಈ ಒನ್ ಟೈಮ್ ರಿಯಾಯಿತಿ ನೀಡುತ್ತಿದೆ.
ಕೆ-ಪಾಪ್ ಸ್ಟಾರ್ ಸುಗಾ ಸ್ಪಾಟಿಫೈ ಖಾತೆ ಹ್ಯಾಕ್….! ಕೊರಿಯನ್ ಸಿಂಗರ್ ಖಾತೆಯಲ್ಲಿ ʼಭೋಜ್‌ಪುರಿʼ ಹಾಡು
ದ್ವಿಚಕ್ರ ವಾಹನಗಳು ಮತ್ತು ಆಟೋಗಳಿಗೆ ಶೇ.25ರಷ್ಟು ಚಲನ್ ಮೊತ್ತ ಪಾವತಿಸಿದರೆ ಬಾಕಿ ಉಳಿದಿರುವ ಶೇ.75 ರಷ್ಟು ಚಲನ್ ನ ಮೊತ್ತವನ್ನು ಮನ್ನಾ ಮಾಡಲಾಗುತ್ತದೆ. ಇದರರ್ಥ 1 ಸಾವಿರ ರೂಪಾಯಿ ದಂಡದ ಚಲನ್ ನೀಡಿದ್ದರೆ, ವ್ಯಕ್ತಿಯೊಬ್ಬ 250 ರೂಪಾಯಿ ಪಾವತಿ ಮಾಡಿದರೆ ಸಾಕಾಗುತ್ತದೆ.
ತಳ್ಳುವ ಗಾಡಿಗಳು ಮತ್ತು ಸಣ್ಣ ಮಾರಾಟಗಾರರಿಗೆ (39b ಪ್ರಕರಣಗಳು), 20% ಪಾವತಿಸಿದರೆ, ಉಳಿದ 80% ಅನ್ನು ಮನ್ನಾ ಮಾಡಲಾಗುತ್ತದೆ.
ಲಘು ಮೋಟಾರು ವಾಹನಗಳು (ಎಲ್‌ಎಂವಿಗಳು), ಕಾರುಗಳು, ಜೀಪ್‌ಗಳು ಮತ್ತು ಭಾರೀ ವಾಹನಗಳಿಗೆ, 50% ಪಾವತಿಸಿದರೆ, ಉಳಿದ 50% ಮನ್ನಾ ಮಾಡಲಾಗುತ್ತದೆ.
ರಸ್ತೆ ಸಾರಿಗೆ ನಿಗಮದ (ಆರ್‌ಟಿಸಿ) ಚಾಲಕರಿಗೆ ಶೇ.30 ಪಾವತಿಸಿದರೆ ಉಳಿದ ಶೇ.70 ರಷ್ಟನ್ನು ಮನ್ನಾ ಮಾಡಲಾಗುತ್ತದೆ.
ಅಧಿಕೃತ ಮೂಲಗಳ ಪ್ರಕಾರ, ಪಾವತಿಗಳನ್ನು ಆನ್‌ಲೈನ್ ಮೋಡ್ ಮೂಲಕ ಮಾಡಬೇಕು. ಈ ಸೌಲಭ್ಯವನ್ನು ಮಾರ್ಚ್ 1 ರಿಂದ ಮಾರ್ಚ್ 31 ರ ನಡುವೆ ಬಳಸಬಹುದು.