ಹೈದರಾಬಾದ್: 2013ರಲ್ಲಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾಲು ಕಳೆದುಕೊಂಡರೂ ಸಾಧನೆಗೆ ದೈಹಿಕ ನ್ಯೂನತೆ ಅಡ್ಡಿಯಲ್ಲ ಎಂಬುದನ್ನು ಸಾಬೀತುಪಡಿಸಿದ್ದಾರೆ. ಕೃತಕ ಕಾಲುಗಳ ಮುಖಾಂತರ 28 ವರ್ಷದ ಅಳಿಗಾ ಪ್ರಸನ್ನ ಮ್ಯಾರಥಾನ್‌ನಲ್ಲಿ ಯಶಸ್ವಿಯಾಗಿ ಸ್ಪರ್ಧಿಸುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.
2013ರಲ್ಲಿ ಭೀಕರ ಅಪಘಾತ ಸಂಭವಿಸಿದಾಗ ತನ್ನ ಕಾಲು ಕಳೆದುಕೊಂಡಿದ್ದಾಗಿ ಅಳಿಗಾ ಹೇಳಿದ್ದಾರೆ. ಘಟನೆಯಲ್ಲಿ 20 ರಷ್ಟು ಮಾತ್ರ ಬದುಕುಳಿಯುವ ಸಾಧ್ಯತೆ ಇತ್ತು. ಅಂಗಚ್ಛೇದನದ ನಂತರ ತಾನು ಬದುಕುಳಿದೆ. ಹೀಗಾಗಿ ಕೃತಕ ಕಾಲುಗಳ ಮುಖಾಂತರ ಇವರು ನಡೆಯುತ್ತಿದ್ದಾರೆ. ಪ್ರಸನ್ನ ಅವರು ಅಪಘಾತದ ದಿನಗಳನ್ನು ನೆನಪಿಸಿಕೊಂಡಿದ್ದು, ಆ ದಿನಗಳು ತುಂಬಾ ಕಷ್ಟಕರವಾಗಿತ್ತು ಎಂದು ಹೇಳಿದ್ದಾರೆ. ಅವರು ವೃತ್ತಿಪರ ಫೋಟೋಗ್ರಾಫರ್ ಮತ್ತು ವಿಡಿಯೋ ಎಡಿಟರ್ ಆಗಿದ್ದಾರೆ.
ತನ್ನ ಕಷ್ಟದ ಸಮಯದಲ್ಲಿ ಸ್ನೇಹಿತರು ಮತ್ತು ಕುಟುಂಬ ಬೆಂಬಲ ನೀಡಿದ್ದಾಗಿ ಅವರು ನೆನಪಿಸಿಕೊಂಡಿದ್ದಾರೆ. ಮೊದಲ ಮ್ಯಾರಥಾನ್ 5 ಕಿ.ಮೀ. ದೂರವಿದ್ದು, ಇದನ್ನು ಇವರು ಒಂದು ಗಂಟೆಯಲ್ಲಿ ಪೂರ್ಣಗೊಳಿಸಿದ್ದರಂತೆ.
ನಂತರ 10 ಕಿ.ಮೀ. ಮ್ಯಾರಥಾನ್ ನಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ ಅಳಿಗಾ ಪ್ರಸನ್ನ, ತನಗೆ ತಾನೇ ಸವಾಲು ಹಾಕಿಕೊಂಡಿದ್ದಾರೆ. ಇವರು 10 ಕಿ.ಮೀ. ಓಟವನ್ನು ಒಂದೂವರೆ ಗಂಟೆಯಲ್ಲಿ ಪೂರ್ಣಗೊಳಿಸಿದ್ದಾಗಿ ತಿಳಿಸಿದ್ದಾರೆ.