ಹೈದರಾಬಾದ್: ಹೈದರಾಬಾದ್‌ನ ಬಳೆ ಶೋರೂಮ್‌ನಲ್ಲಿ ಕೆಲಸ ಮಾಡುತ್ತಿದ್ದ ಸಿರಾಜ್ ಎಂಬ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತನ್ನ ಜೀವವನ್ನು ತೆಗೆದುಕೊಳ್ಳುವ ಮೊದಲು ತನ್ನ ಹೆಂಡತಿ ಮತ್ತು ತನ್ನ ಕಿರಿಯ ಮಗನನ್ನು ಕೊಲೆ ಮಾಡಿದ್ದಾನೆ.
ಹೈದರಾಬಾದ್‌ನಲ್ಲಿರುವ ಅವರ ನಿವಾಸದಲ್ಲಿ ಶನಿವಾರ ಮೂವರ ಮೃತದೇಹಗಳು ಪತ್ತೆಯಾದಾಗ ಈ ಘಟನೆ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಫಿರೋಜಾಬಾದ್ ಮೂಲದ 38 ವರ್ಷದ ಸಿರಾಜ್, ಕಳೆದ ಆರು ವರ್ಷಗಳಿಂದ ಹೈದರಾಬಾದ್‌ನಲ್ಲಿ ಕೆಲಸ ಮಾಡುತ್ತಿದ್ದಾನೆ. 7 ವರ್ಷಗಳ ಹಿಂದೆ ಪತ್ನಿ ಅಹಲ್ಯಾ(35) ಅವರನ್ನು ಪ್ರೇಮ ವಿವಾಹವಾಗಿದ್ದರು. ದಂಪತಿಗೆ ಐದು ಮತ್ತು ಎರಡೂವರೆ ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ.
ಸ್ಥಳೀಯ ಪೊಲೀಸರ ಪ್ರಕಾರ, ಸಿರಾಜ್ ತನ್ನ ಹೆಂಡತಿಯ ಬಗ್ಗೆ ಅನುಮಾನ ಹೊಂದಿದ್ದ. ದಂಪತಿ ಇತ್ತೀಚೆಗೆ ಫಿರೋಜಾಬಾದ್‌ನಲ್ಲಿ ಸಂಬಂಧಿಕರ ಮದುವೆಯಲ್ಲಿ ಭಾಗವಹಿಸಿ ಹೈದರಾಬಾದ್‌ಗೆ ಮರಳಿದ್ದರು. ಘಟನೆ ನಡೆದ ದಿನ ರಾತ್ರಿ ಮೊಬೈಲ್ ಫೋನ್ ವಿಚಾರವಾಗಿ ಸಿರಾಜ್ ಮತ್ತು ಅಹಲ್ಯಾ ನಡುವೆ ತೀವ್ರ ವಾಗ್ವಾದ ನಡೆದು ವಿಕೋಪಕ್ಕೆ ಹೋಗಿತ್ತು.
ಜಗಳದ ವೇಳೆ ಸಿರಾಜ್ ತನ್ನ ಪತ್ನಿ ಮತ್ತು ಕಿರಿಯ ಮಗನನ್ನು ಕತ್ತು ಹಿಸುಕಿದ್ದಾನೆ ಎಂದು ಹೇಳಲಾಗಿದೆ. ಈ ದೃಶ್ಯವನ್ನು ಕಂಡ ಅವರ ಹಿರಿಯ ಮಗ ತಪ್ಪಿಸಿಕೊಂಡು ನೆರೆಹೊರೆಯವರಿಗೆ ಎಚ್ಚರಿಕೆ ನೀಡುವಲ್ಲಿ ಯಶಸ್ವಿಯಾಗಿದ್ದಾನೆ. ಪೊಲೀಸರು ಬರುವಷ್ಟರಲ್ಲಿ ಸಿರಾಜ್ ನೇಣು ಬಿಗಿದುಕೊಂಡಿದ್ದ.
ಮೊಬೈಲ್ ಫೋನ್ ಪಾಸ್ ವರ್ಡ್ ವಿವಾದದಿಂದಾಗಿ ಈ ಘಟನೆ ಸಂಭವಿಸಿದೆ ಎಂದು ಹೈದರಾಬಾದ್‌ನ ದಕ್ಷಿಣ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ ಯೋಗೇಂದ್ರ ಪಾಲ್ ಸಿಂಗ್ ಹೇಳಿದ್ದಾರೆ.