ಮಗು ಹೆರುವ ಸಂದರ್ಭ ಗರ್ಭಿಣಿ ಮಹಿಳೆಗೆ ಮರುಹುಟ್ಟು ಎಂದು ಹೇಳಲಾಗುತ್ತದೆ. ಈ ಒಂದು ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮಗುವಿನ ಮುಖ ನೋಡಿದರೆ ಮಹಿಳೆಯರು ಧನ್ಯತಾಭಾವ ಅನುಭವಿಸುತ್ತಾರೆ. ಇದೀಗ ತೆಲಂಗಾಣದ ಸರ್ಕಾರಿ ಆಸ್ಪತ್ರೆಯಲ್ಲಿ ‘ಪ್ರಸವ ವೇದನೆ’ ತಡೆಗೆ ಲಾಫಿಂಗ್ ಗ್ಯಾಸ್ ಬಳಕೆ ಮಾಡುವ ಮೂಲಕ ಗರ್ಭಿಣಿಯರಿಗೆ ಒಂದಷ್ಟು ರಿಲೀಫ್ ನೀಡುತ್ತಿದೆ.
ಹೌದು, ಕಿಂಗ್ ಕೋಟಿ ಜಿಲ್ಲಾಸ್ಪತ್ರೆಯಲ್ಲಿ ಇಂಥದ್ದೊಂದು ಪ್ರಯೋಗ ಮಾಡಲಾಗುತ್ತಿದ್ದು ಅದರಲ್ಲಿ ಯಶಸ್ವಿಯಾಗಿದೆ. ಡೆಲಿವರಿ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಗೆ ಲಾಫಿಂಗ್ ಗ್ಯಾಸ್ ಅಥವಾ Entonox (ನೈಟ್ರಸ್ ಆಕ್ಸೈಡ್ ಮತ್ತು ಆಕ್ಸಿಜನ್ ಮಿಶ್ರಣ) ನೀಡಲಾಗುತ್ತಿದ್ದು, ಇದರಿಂದಾಗಿ ಗರ್ಭಿಣಿಯರಿಗೆ ಕೊಂಚ ರಿಲೀಫ್ ಸಿಗುತ್ತದೆ ಎನ್ನಲಾಗಿದೆ.
ಈ ಕುರಿತಂತೆ ಮಾತನಾಡಿರುವ ಆಸ್ಪತ್ರೆಯ ಪ್ರಸೂತಿ ತಜ್ಞೆ ಡಾಕ್ಟರ್ ಜಲಜಾ ವೆರೋನಿಕಾ, ಯಾವ ಗರ್ಭಿಣಿ ಮಹಿಳೆಗೆ ಅತೀವ ವೇದನೆ ಇರುತ್ತದೋ ಅಂತವರಿಗೆ ಹೈದರಾಬಾದಿನ ಈ ಆಸ್ಪತ್ರೆಯಲ್ಲಿ ಲಾಫಿಂಗ್ ಗ್ಯಾಸ್ ನೀಡುವ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ.
ಡೆಲಿವರಿ ಸಂದರ್ಭದಲ್ಲಿ ಗರ್ಭಿಣಿಯರು ಆಕ್ಸಿಜನ್ ಮತ್ತು ಲಾಫಿಂಗ್ ಗ್ಯಾಸ್ ಮಿಶ್ರಣವಾದ ಇದನ್ನು ಸೇವಿಸಿದರೆ ಅವರಿಗೆ ವೇದನೆ ಕಡಿಮೆಯಾಗುತ್ತದೆ. ಈಗಾಗಲೇ 13ಕ್ಕೂ ಅಧಿಕ ಗರ್ಭಿಣಿ ಮಹಿಳೆಯರ ಮೇಲೆ ಈ ಪ್ರಯೋಗ ಮಾಡಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರೆ ಆಸ್ಪತ್ರೆಗಳಲ್ಲೂ ಈ ವಿಧಾನವನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.