ಹೈದರಾಬಾದ್: ಇಲ್ಲಿನ ಬಾಳಾಪುರ ಗಣೇಶನ ಪ್ರಸಿದ್ಧ 21 ಕೆಜಿ ಲಡ್ಡು ಪ್ರಸಾದ ಶುಕ್ರವಾರ ನಡೆದ ಹರಾಜಿನಲ್ಲಿ 24.60 ಲಕ್ಷ ರೂ.ಗೆ ಮಾರಾಟವಾಗಿದೆ.
ಸ್ಥಳೀಯ ಉದ್ಯಮಿ ವಿ ಲಕ್ಷ್ಮಾ ರೆಡ್ಡಿ ಹರಾಜಿನಲ್ಲಿ ಲಡ್ಡು ಪಡೆದುಕೊಂಡಿದ್ದಾರೆ. ಕಳೆದ ವರ್ಷ 18.90 ಲಕ್ಷ ರೂ.ಗೆ ಲಡ್ಡು ಹರಾಜಾಗಿತ್ತು.
ಲಡ್ಡು ಖರೀದಿಸಿದವರಿಗೆ ಅದೃಷ್ಟ, ಆರೋಗ್ಯ, ಸಂಪತ್ತು ಮತ್ತು ಸಮೃದ್ಧಿಯನ್ನು ತರುತ್ತದೆ ಎಂನಬ ನಂಬಿಕೆ ಇದೆ. ಗಣಪತಿ ವಿಸರ್ಜನೆಗೆ ಮೊದಲು ಮೊದಲು ಲಡ್ಡು ಹರಾಜು ನಡೆಸಲಾಯಿತು.
ನಗರದಲ್ಲಿ ಗಣೇಶ ಮೂರ್ತಿಗಳ ನಿಮಜ್ಜನಕ್ಕೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಶನಿವಾರ ಮಧ್ಯಾಹ್ನದವರೆಗೆ ನಿಮಜ್ಜನ ಕಾರ್ಯಕ್ರಮ ಮುಂದುವರಿಯುವ ನಿರೀಕ್ಷೆಯಿದೆ. ಮಳೆಯ ನಡುವೆಯೂ ವಿಸರ್ಜನಾ ಮೆರವಣಿಗೆ ಸಂಭ್ರಮದಿಂದ ನಡೆಸಲಾಗುತ್ತಿದೆ.
ಹೈದರಾಬಾದ್, ಸೈಬರಾಬಾದ್ ಮತ್ತು ರಾಚಕೊಂಡ ಮೂರು ಪೊಲೀಸ್ ಕಮಿಷನರೇಟ್ ಗಳಲ್ಲಿ ಕಾರ್ಯಕ್ರಮದ ಸುಗಮ ನಿರ್ವಹಣೆಗಾಗಿ 35,000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತೆಲಂಗಾಣ ಡಿಜಿಪಿ ಮಹೇಂದರ್ ರೆಡ್ಡಿ ತಿಳಿಸಿದ್ದಾರೆ.
ಬಾಲಾಪುರದಿಂದ ಹುಸೇನ್ ಸಾಗರ್ ವರೆಗಿನ 19 ಕಿ.ಮೀ ಮೆರವಣಿಗೆ ಮಾರ್ಗದಲ್ಲಿ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೈದರಾಬಾದ್ ಪೊಲೀಸ್ ಕಮಿಷನರ್ ಸಿವಿ ಆನಂದ್ ತಿಳಿಸಿದ್ದಾರೆ.
ಈ ವರ್ಷ ನಗರದಾದ್ಯಂತ ಸುಮಾರು 9,523 ಮೂರ್ತಿಗಳನ್ನು (3 ಅಡಿ ಕೆಳಗಿನ ವಿಗ್ರಹಗಳನ್ನು ಹೊರತುಪಡಿಸಿ) ಸ್ಥಾಪಿಸಲಾಗಿತ್ತು.