ಬೆಂಗಳೂರು: ರಾಜ್ಯ ಸರ್ಕಾರದ ಸ್ವಾಮ್ಯದ ಮೈಸೂರು ಸ್ಯಾಂಡಲ್ ಸಾಬೂನನ್ನು ನಕಲಿಯಾಗಿ ತಯಾರಿಸಿ, ಮಾರಾಟ ಮಾಡುತ್ತಿದ್ದ ಘಟಕವೊಂದು ಹೈದರಾಬಾದ್ ನಲ್ಲಿ ಪತ್ತೆಯಾಗಿದೆ.
ಕೆ ಎಸ್ ಡಿ ಎಲ್ ಅಧ್ಯಕ್ಷರೂ ಆಗಿರುವ ಸಚಿವ ಎಂ.ಬಿ ಪಾಟೀಲ ಅವರಿಗೆ ಅನಾಮಧೇಯ ವ್ಯಕ್ತಿಯೊಬ್ಬ ಕರೆ ಮಾಡಿ ಮಾಹಿತಿ ನೀಡಿದ್ದ ಹಿನ್ನೆಲೆಯಲ್ಲಿ ಸಚಿವರ ಸೂಚನೆ ಮೇರೆಗೆ ಕೆ ಎಸ್ ಡಿ ಎಲ್ ವ್ಯವಸ್ಥಾಪಕ ನಿರ್ದೇಶಕ ಡಾ.ಪ್ರಶಾಂತ್ ಹೈದರಾಬಾದ್ ನಲ್ಲಿ ನಿಗಾ ವಹಿಸಿದ್ದರು. ಈ ವೇಳೆ ಹೈದರಾಬಾದ್ ನ ಕೈಗಾರಿಕಾ ಪ್ರದೇಶದಲ್ಲಿ ಕೆ ಎಸ್ ಡಿ ಎಲ್ ಅಧಿಕಾರಿಗಳು ದಾಳಿ ನಡೆಸಿದ್ದು, ನಕಲಿ ಮೈಸೂರು ಸ್ಯಾಂಡಲ್ ಉತ್ಪನ್ನ, ಪ್ಯಾಕಿಂಗ್ ಗೆ ಬಳಸುತ್ತಿದ್ದ ಕಾರ್ಟನ್ ಬಾಕ್ಸ್ ಗಳು ಸೇರಿದಂತೆ ಸುಮಾರು 2 ಕೋಟಿ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.
ನಕಲಿ ಸಾಬೂನು ತಯಾರಿಕೆ ಆರೋಪದ ಮೇಲೆ ಹೈದರಾಬಾದಿನ ರಾಕೇಶ್ ಜೈನ್ ಮತ್ತು ಮಹಾವೀರ್ ಜೈನ್ ಎಂಬುವವರನ್ನು ಬಂಧಿಸಿದ್ದಾರೆ.
ತಲಾ 150 ಗ್ರಾಂ ತೂಕದ 3 ಸಾಬೂನುಗಳಿರುವ 20 ಕಾರ್ಟನ್ ಬಾಕ್ಸ್ ಗಳು, ತಲಾ 75 ಗ್ರಾಂ ನ 47 ಕಾರ್ಟನ್ ಬಾಕ್ಸ್ ಗಳು, 150 ಗ್ರಾಂ ಸಾಬೂನು ಪ್ಯಾಕ್ ಮಾಡುವ 400 ಖಾಲಿ ಕಾರ್ಟನ್ ಬಾಕ್ಸ್ ಗಳು ಮತ್ತು 75 ಗ್ರಾಂ ಸಾಬೂನು ಪ್ಯಾಕ್ ಮಾಡುವ 400 ಕಾರ್ಟನ್ ಬಾಕ್ಸ್ ಗಳು ನಕಲಿ ಘಟಕದಲ್ಲಿ ಪತ್ತೆಯಾಗಿವೆ.