ಹೈದರಾಬಾದ್ ಉಸ್ಮಾನಿಯಾ ಜನರಲ್ ಆಸ್ಪತ್ರೆಯ ಕಿರಿಯ ವೈದ್ಯರು ಹೆಲ್ಮೆಟ್ ಧರಿಸಿ ಸೇವೆಗೆ ಹಾಜರಾಗುವ ಮೂಲಕ ವಿಶಿಷ್ಟ ಮಾದರಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಸೋಮವಾರದಂದು ಚರ್ಮರೋಗ ವಿಭಾಗದ ಕರ್ತವ್ಯ ನಿರತ ಮಹಿಳಾ ವೈದ್ಯೆಯ ಮೇಲೆ ಫ್ಯಾನ್ ಬಿದ್ದ ಪರಿಣಾಮ ತಲೆಗೆ ಗಾಯವಾಗಿತ್ತು. ಈ ಘಟನೆಯನ್ನು ವಿರೋಧಿಸಿ ವೈದ್ಯರ ತಂಡವು ಈ ರೀತಿಯಾಗಿ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯ ಭಾಗವಾಗಿ ಕಿರಿಯ ವೈದ್ಯರ ನಿಯೋಗವು ಆಸ್ಪತ್ರೆಯ ಅಧೀಕ್ಷಕರನ್ನು ಭೇಟಿಯಾಗಿ ತಮ್ಮ ಬೇಡಿಕೆಯನ್ನು ಸಲ್ಲಿಸಿದೆ. ಈ ರೀತಿಯ ಘಟನೆಗಳು ಉಸ್ಮಾನಿಯಾ ಜನರಲ್ ಆಸ್ಪತ್ರೆಯಲ್ಲಿ ದಿನಕ್ಕೊಂದು ಎಂಬಂತೆ ನಡೆಯುತ್ತಿದೆ. ಇಂತಹ ಭಯಾನಕ ಘಟನೆಗಳಿಂದ ಇನ್ನೂ ಯಾರಿಗೂ ಪ್ರಾಣಹಾನಿ ಸಂಭವಿಸಿಲ್ಲ ಎಂಬುದೇ ನಮಗೆ ಸಮಾಧಾನಕರ ವಿಚಾರವಾಗಿದೆ. ಹಾಗೆಂದು ಇಂತಹ ಘಟನೆಗಳನ್ನು ಇನ್ನಷ್ಟು ಸಹಿಸಲು ಸಾಧ್ಯವಿಲ್ಲ. ಇದಕ್ಕೆ ಆಸ್ಪತ್ರೆಯ ಆಡಳಿತ ಮಂಡಳಿ ಯಾವುದೇ ರೀತಿಯ ಉತ್ತರ ನೀಡದೇ ಇರೋದು ನಿಜಕ್ಕೂ ಬೇಸರದ ಸಂಗತಿಯಾಗಿದೆ ಎಂದು ಕಿರಿಯ ವೈದ್ಯರು ಅಸಮಾಧಾನ ಹೊರಹಾಕಿದ್ದಾರೆ.
ಈ ರೀತಿಯ ಲೋಪದೋಷಗಳ ಬಗ್ಗೆ ಗಮನಹರಿಸುವಂತೆ ವೈದ್ಯರು ಆಸ್ಪತ್ರೆ ಆಡಳಿತ ಮಂಡಳಿಗೆ ಮನವಿ ಮಾಡಿದ್ದಾರೆ. ಈ ರೀತಿ ನಮ್ಮ ಜೀವವನ್ನೇ ಕೈಯಲ್ಲಿ ಹಿಡಿದುಕೊಂಡು ರೋಗಿಗಳ ಜೀವ ಕಾಪಾಡೋದು ಹೇಗೆ ಎಂದು ಕಿರಿಯ ವೈದ್ಯರು ಪ್ರಶ್ನಿಸಿದ್ದಾರೆ.