
ಹೈದರಾಬಾದ್: ಅಪಾರ್ಟ್‌ಮೆಂಟ್ ಸಂಕೀರ್ಣದಲ್ಲಿ ಲಿಫ್ಟ್ ಶಾಫ್ಟ್ ಮತ್ತು ಗೋಡೆಯ ನಡುವೆ ಸಿಲುಕಿ ಬಾಲಕ ಮೃತಪಟ್ಟಿದ್ದಾನೆ. ಗಂಭೀರ ಸ್ಥಿತಿಯಲ್ಲಿದ್ದ 6 ವರ್ಷದ ಬಾಲಕನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮಸಾಬ್ ಟ್ಯಾಂಕ್ ಪ್ರದೇಶದಲ್ಲಿ ಶುಕ್ರವಾರ ಬಾಲಕ ಲಿಫ್ಟ್ ಬಾಗಿಲು ಮತ್ತು ಗೋಡೆಯ ನಡುವಿನ ಅಂತರಕ್ಕೆ ಜಾರಿಬಿದ್ದು ಮೊದಲ ಮಹಡಿಯ ಬಳಿ ಎರಡು ಗಂಟೆಗಳಿಗೂ ಹೆಚ್ಚು ಕಾಲ ಸಿಕ್ಕಿಹಾಕಿಕೊಂಡಿದ್ದ. ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿ ಸಂರಕ್ಷಣಾ ಸಂಸ್ಥೆ(HYDRAA) ಮತ್ತು ಅಗ್ನಿಶಾಮಕ ಇಲಾಖೆಯ ಸಿಬ್ಬಂದಿ ಗ್ಯಾಸ್ ಕಟ್ಟರ್‌ಗಳನ್ನು ಬಳಸಿ ಲಿಫ್ಟ್ ಫ್ರೇಮ್ ಮತ್ತು ನೆಲದ ಸ್ಲ್ಯಾಬ್ ಅನ್ನು ಕತ್ತರಿಸಿ ಆತನನ್ನು ರಕ್ಷಿಸಿದರು. ನಂತರ ಆತನನ್ನು ಆಸ್ಪತ್ರೆಗೆ ದಾಖಲಿಸಲಾಯಿತು.
ಆಂತರಿಕ ಗಾಯಗಳಿಂದ ಬಳಲುತ್ತಿದ್ದ ಬಾಲಕನನ್ನು ಶನಿವಾರ ಮಧ್ಯಾಹ್ನ 12:30 ರ ಸುಮಾರಿಗೆ ಮೃತಪಟ್ಟಿರುವುದಾಗಿ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರವಾದ ಕಾರಣವನ್ನು ನಿರ್ಧರಿಸಲಾಗುವುದು ಎಂದು ಅವರು ಹೇಳಿದರು.
ಬಾಲಕ ತನ್ನ ಅಜ್ಜನೊಂದಿಗೆ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿರುವ ಸಂಬಂಧಿಕರನ್ನು ಭೇಟಿ ಮಾಡಲು ಹೋಗಿ ನೆಲ ಮಹಡಿಯಲ್ಲಿರುವ ಲಿಫ್ಟ್ ಗೆ ಪ್ರವೇಶಿಸಿದ್ದ. ಆದರೆ, ಗ್ರಿಲ್ ಬಾಗಿಲು ಮುಚ್ಚುವ ಮೊದಲು, ಲಿಫ್ಟ್ ಮೇಲಕ್ಕೆ ಏರಲು ಪ್ರಾರಂಭಿಸಿತು, ಮತ್ತು ಹುಡುಗ ಹೊರಬರಲು ಪ್ರಯತ್ನಿಸಿದಾಗ, ಅವನು ಲಿಫ್ಟ್ ಮತ್ತು ಗೋಡೆಯ ನಡುವೆ ಸಿಲುಕಿಕೊಂಡನು ಎಂದು ಪ್ರಾಥಮಿಕ ತನಿಖೆಗಳು ತಿಳಿಸಿವೆ. ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.