ನವದೆಹಲಿ: ಪತ್ನಿಗೆ ಆರ್ಥಿಕ ನೆರವು ನೀಡುವುದು ಪತಿಯ ಕರ್ತವ್ಯವಾಗಿದೆ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಕಾನೂನು ಸಮ್ಮತಿ ಇರುವ ನಿರ್ದಿಷ್ಟ ಪ್ರಕರಣ ಹೊರತಾಗಿ ಪತ್ನಿಯನ್ನು ನೋಡಿಕೊಳ್ಳುವುದು, ಆಕೆಗೆ ಹಣಕಾಸು ಬೆಂಬಲ ನೀಡುವುದು ಪತಿಯ ಕರ್ತವ್ಯವಾಗಿದೆ ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಗಂಡನಿಂದ ಬೇರೆಯಾಗಿರುವ ಪತ್ನಿಗೆ ಮಾಸಿಕ 17 ಸಾವಿರ ರೂಪಾಯಿ ನೀಡಬೇಕು ಎಂದು ಕೆಳಹಂತದ ಕೋರ್ಟ್ ನೀಡಿದ ಆದೇಶವನ್ನು ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಸುಬ್ರಹ್ಮಣ್ಯಂ ಪ್ರಸಾದ್ ಎತ್ತಿಹಿಡಿದಿದ್ದಾರೆ.
ಸಹಾಯಕ ಸಬ್ಇನ್ಸ್ಪೆಕ್ಟರ್ ಆಗಿರುವ ವ್ಯಕ್ತಿ, ಕೆಳಹಂತದ ಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ನಿಶ್ಚಿತ ಆದಾಯವಿಲ್ಲದ ಪತ್ನಿಗೆ ಪ್ರತಿ ತಿಂಗಳು 17,000 ರೂ. ನೀಡಲು ಶಕ್ತರಾಗಿದ್ದಾರೆ ಎಂದು ಕೋರ್ಟ್ ಹೇಳಿದೆ.
1985 ರಲ್ಲಿ ದಂಪತಿ ಮದುವೆಯಾಗಿದ್ದು, ಅವರಿಗೆ ಇಬ್ಬರು ಪುತ್ರರು ಇದ್ದಾರೆ. 2010 ರಲ್ಲಿ ಅವರ ಪುತ್ರಿ ಮೃತಪಟ್ಟಿದ್ದಾರೆ. 2012 ರಲ್ಲಿ ದಂಪತಿ ಬೇರೆಯಾಗಿದ್ದು, ಪತಿಗೆ ಮಾಸಿಕ 50,000 ರೂ. ಆದಾಯದ ಜೊತೆಗೆ ಕೃಷಿಯಿಂದಲೂ ಆದಾಯ ಬರುತ್ತಿದೆ. ನಿಶ್ಚಿತ ಆದಾಯವಿಲ್ಲದ ಪತ್ನಿಗೆ ಮಾಸಿಕ 17,000 ರೂ. ನೀಡಬೇಕೆಂದು ಕೋರ್ಟ್ ಸೂಚಿಸಿದೆ. ಪತ್ನಿ ಕೂಡ ಹಣ ಸಂಪಾದಿಸುತ್ತಿದ್ದಾರೆ ಎಂದು ಪತಿ ವಾದಿಸಿದ್ದು, ಆದರೆ ಇದನ್ನು ಒಪ್ಪದ ಕೋರ್ಟ್ ಕಡಿಮೆ ಪ್ರಮಾಣದ ಆದಾಯವಿದೆ ಎಂದು ಮಹಿಳೆ ತಿಳಿಸಿದ್ದಾರೆ. ಹಾಗೆಂದ ಮಾತ್ರಕ್ಕೆ ಆಕೆ ಬದುಕಲು ಅಗತ್ಯವಾದ ಸಂಪಾದನೆ ಮಾಡುತ್ತಿದ್ದಾರೆ ಎಂದರ್ಥವಲ್ಲ ಎಂದು ಅಭಿಪ್ರಾಯಪಟ್ಟಿದೆ. ಮಹಿಳೆ ಸ್ವಂತ ಬಲದಿಂದ ಬದುಕಲು ಶಕ್ತರಾಗಿದ್ದಾರೆ ಎಂಬುದಕ್ಕೆ ಯಾವುದೇ ದಾಖಲೆ ಒದಗಿಸಿಲ್ಲ ಎಂದು ತಿಳಿಸಲಾಗಿದೆ.