ಚಿತ್ರದುರ್ಗ: ವಿಚ್ಛೇದನ ಕೋರಿ ಕೋರ್ಟ್ ಮೆಟ್ಟಿಲೇರಿದ್ದ ಪತಿ ಮಹಾಶಯನೇ ಪತ್ನಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಬಸ್ ನಿಲ್ದಾಣದ ಬಳಿ ನಡೆದಿದೆ.
ಪತಿ ಶಿವಕುಮಾರ್ ಪತ್ನಿ ಆಶಾ (26) ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿದ್ದಾನೆ. ಶಿವಕುಮಾರ್ ಚಳ್ಳಕೆರೆ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದ. ಇಂದು ಕೋರ್ಟ್ ನಲ್ಲಿ ವಿಚಾರಣೆ ಇತ್ತು. ಕೋರ್ಟ್ ಗೆ ತೆರಳುವಾಗ ಬಸ್ ನಿಲ್ದಾಣದ ಬಳಿ ಪತಿ-ಪತ್ನಿ ಮುಖಾಮುಖಿಯಾಗಿದ್ದಾರೆ.
ಈ ವೇಳೆ ರಸ್ತೆ ಬಳಿ ಇದ್ದ ಎಳನೀರು ಕೊಚ್ಚುವ ಮಚ್ಚು ಕಸಿದುಕೊಂಡು ಪತ್ನಿ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಪತ್ನಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪಿ ಶಿವಕುಮಾರ್ ನನ್ನು ಹಿಡಿದು ಸ್ಥಳೀಯರು ಥಳಿಸಿದ್ದಾರೆ. ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.