ಲಾಟರಿಯಲ್ಲಿ 12 ಮಿಲಿಯನ್ ಥಾಯ್ ಭಾಟ್ (2.9 ಕೋಟಿ ರೂ.)ಗಳಷ್ಟು ಹಣ ಗೆದ್ದ ತನ್ನ ಮಡದಿ ಕೂಡಲೇ ಬೇರೊಬ್ಬ ವ್ಯಕ್ತಿಯನ್ನು ಮದುವೆಯಾದ ವಿಚಾರ ತಿಳಿದ ಥಾಯ್ಲೆಂಡ್ ಪುರುಷನೊಬ್ಬನಿಗೆ ಭಾರೀ ಆಘಾತವಾಗಿದೆ.
ಸ್ಥಳೀಯ ಪತ್ರಿಕೆ ’ಥಾಯ್ಗರ್’ ವರದಿ ಮಾಡಿರುವ ಪ್ರಕಾರ: 47 ವರ್ಷ ವಯಸ್ಸಿನ ನಾರಿನ್ ತನ್ನ ಮಡದಿ ವಿರುದ್ಧ ಮಾರ್ಚ್ 11 ರಂದು ಈ ಸಂಬಂಧ ಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಆಪಾದಿತೆಯನ್ನು 20 ವರ್ಷದ ಹಿಂದೆಯೇ ಮದುವೆಯಾಗಿರುವ ನಾರಿನ್‌ಗೆ ಈಕೆಯಿಂದ ಮೂರು ಮಕ್ಕಳು ಜನಿಸಿದ್ದಾರೆ.
ಎರಡು ದಶಲಕ್ಷ ಭಾಟ್‌ನಷ್ಟು ಸಾಲವಿದ್ದ ಕಾರಣ ನಾರಿನ್ ದಕ್ಷಿಣ ಕೊರಿಯಾಗೆ ತೆರಳಿ ಅಲ್ಲಿ ದುಡಿದು ತನ್ನ ಸಾಲ ತೀರಿಸಲು 2014ರಲ್ಲಿ ನಿರ್ಧರಿಸಿದ್ದರು. ದಕ್ಷಿಣ ಕೊರಿಯಾದಲ್ಲಿ ದುಡಿಯುತ್ತಿದ್ದ ವೇಳೆ ಪ್ರತಿ ತಿಂಗಳು ಮನೆಗೆ 27,000-30,000 ಭಾಟ್‌ಗಳನ್ನು ಈತ ತನ್ನ ಮಡದಿ ಚಾವೀವಾನ್‌ಗೆ ಕಳುಹಿಸಿ, ಕುಟುಂಬದ ಪಾಲನೆಗೆ ನೆರವಾಗುತ್ತಿದ್ದರು.
ತನ್ನ ಮಡದಿ ಲಾಟರಿಯಲ್ಲಿ ದುಡ್ಡು ಗೆದ್ದಿರುವ ವಿಚಾರವನ್ನು ತನ್ನಿಂದ ಮುಚ್ಚಿಟ್ಟಿರುವ ವಿಷಯ ನಾರಿನ್‌ಗೆ ತಡವಾಗಿ ತಿಳಿದುಬಂದಿದೆ. ಆಪಾದಿತೆ ತನ್ನ ಕರೆಗಳಿಗೆ ಸ್ಪಂದಿಸುವುದನ್ನು ನಿಲ್ಲಿಸಿದ ಬಳಿಕ ಏನಾಗಿದೆ ಎಂದು ಅರಿಯಲು ಮಾರ್ಚ್ 3ರಂದು ಥಾಯ್ಲೆಂಡ್‌ಗೆ ಮರಳಿದ್ದಾರೆ ನಾರಿನ್. ಫೆಬ್ರವರಿ 25ರಂದೇ ತನ್ನ ಮಡದಿ ಪೊಲೀಸ್ ಸಿಬ್ಬಂದಿಯೊಬ್ಬನೊಂದಿಗೆ ಮದುವೆಯಾಗಿರುವ ಅಂಶ ಬೆಳಕಿಗೆ ಬಂದಿದೆ.
“ಮದುವೆಯಾದ 20 ವರ್ಷಗಳ ಬಳಿಕ ನನ್ನ ಮಡದಿ ನನಗೆ ಹೀಗೆ ಮಾಡಬಹುದು ಎಂದು ನಾನು ಅಂದುಕೊಂಡಿರಲಿಲ್ಲ. ನನಗೆ ಶಾಕ್ ಆಗಿದ್ದು, ಏನು ಮಾಡಬೇಕೆಂದು ತೋಚುತ್ತಿಲ್ಲ. ಪ್ರತಿ ತಿಂಗಳೂ ಆಕೆಗೆ ದುಡ್ಡು ಕಳುಹಿಸುತ್ತಿದ್ದ ಕಾರಣ ನನ್ನ ಬ್ಯಾಂಕ್ ಖಾತೆಯಲ್ಲಿ ಕೇವಲ 60,000 ಭಾಟ್ ಮಾತ್ರವೇ ಇತ್ತು. ನನಗೆ ಸಿಗಬೇಕಾದ ನ್ಯಾಯ ಹಾಗೂ ದುಡ್ಡಿಗಾಗಿ ಹೋರಾಟ ಮಾಡಲು ನಿರ್ಧರಿಸಿದೆ,” ಎಂದು ನಾರಿನ್ ತಿಳಿಸಿದ್ದಾರೆ.
ಆದರೆ ತಾನು ಲಾಟರಿಯಲ್ಲಿ ಗೆಲ್ಲುವ ಕೆಲ ವರ್ಷಗಳ ಮುಂದೆಯೇ ನಾರಿನ್‌ರಿಂದ ದೂರವಾಗಿದ್ದಾಗಿ ಚಾವಿವಾನ್ ತಿಳಿಸಿದ್ದಾರೆ. ಈ ಬ್ರೇಕಪ್ ಕುರಿತು ತನಗೆ ಗೊತ್ತೇ ಇರಲಿಲ್ಲ ಎನ್ನುತ್ತಾರೆ ನಾರಿನ್. ಪ್ರಕರಣವು ಪೊಲೀಸ್ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಗಳ ತನಿಖೆಯಲ್ಲಿದೆ.