ವಿಡಿಯೋ ಶೇರಿಂಗ್ ಅಪ್ಲಿಕೇಶನ್ ಒಂದನ್ನು ಸ್ಕ್ರೋಲ್ ಮಾಡುತ್ತಿದ್ದ ಚೈನೀಸ್ ಪುರುಷನೊಬ್ಬ ತನ್ನ ಮಡದಿ ಪರಪುರುಷನೊಂದಿಗೆ ಮದುವೆಯಾಗುತ್ತಿರುವ ವಿಡಿಯೋವನ್ನು ಕಂಡು ದಂಗುಬಡಿದಿದ್ದಾನೆ.
ಇನ್ನರ್ ಮಂಗೋಲಿಯಾ ಬಯನ್ನೂರಿನ 35 ವರ್ಷದ ಈ ವ್ಯಕ್ತಿ ತನ್ನ ಕುಟುಂಬದ ಬಲವಂತದಿಂದ ಮದುವೆಯಾಗಿದ್ದ. ಲಿ ಸರ್‌ನೇಮ್‌ನ ಮ್ಯಾಚ್‌ಮೇಕರ್ ಒಬ್ಬರು ಆತನನ್ನು ಗನ್ಸು ಪ್ರದೇಶದ ಮಹಿಳೆಯೊಬ್ಬರಿಗೆ ಪರಿಚಯ ಮಾಡಿಕೊಟ್ಟಿದ್ದರು.
ಮದುವೆಯಾಗಲು 1,48,000 ಯುವಾನ್ (16.9 ಲಕ್ಷ ರೂ.) ವಧುದಕ್ಷಿಣೆಯನ್ನು ಮದುವೆಗೂ ಮುನ್ನವೇ ಡಿಮ್ಯಾಂಡ್ ಮಾಡಿದ್ದ ಈ ಮಹಿಳೆ ಜನವರಿಯಲ್ಲಿ ಈತನನ್ನು ವರಿಸಿದ್ದಳು. ಆದರೆ, ಹೆಣ್ಣಿನ ಮನೆಯ ನೋಂದಣಿಯ ಸಮಸ್ಯೆಯೊಂದರ ಕಾರಣದಿಂದಾಗಿ ಈ ಜೋಡಿಯು ಮದುವೆಯನ್ನು ನೋಂದಣಿ ಮಾಡಿಸಿರಲಿಲ್ಲ.
ಮದುವೆಯಾದ ಕೂಡಲೇ ತಾನು ತನ್ನ ಊರಿಗೆ ಹೋಗಬೇಕೆಂದು ಕಾರಣಗಳನ್ನು ಹೇಳತೊಡಗಿದಳು ನವವಿವಾಹಿತೆ.
ಮಾರ್ಚ್ ತಿಂಗಳಲ್ಲಿ ತನ್ನ ಮಡದಿ ಬೇರೊಬ್ಬನೊಂದಿಗೆ ಮದುವೆಯಾಗುತ್ತಿರುವುದನ್ನು ಕಂಡ ಆಕೆಯ ಪತಿ ಘಟನೆ ಬಗ್ಗೆ ಪೊಲೀಸರಿಗೆ ದೂರು ಕೊಟ್ಟಿದ್ದಾನೆ. ಪೊಲೀಸರು ತನಿಖೆ ನಡೆಸಿದ ಬಳಿಕ, ಗ್ರಾಮೀಣ ಪ್ರದೇಶದಲ್ಲಿ ಮದುವೆಯ ಸರಾಸರಿ ವಯಸ್ಸು ಮೀರಿದ ಯುವಕರನ್ನು ಗುರಿಯಾಗಿಸಿಕೊಂಡು ವಂಚಿಸುವ ಸಮೂಹವೊಂದರ ಟಾರ್ಗೆಟ್ ತಾನಾಗಿರುವುದು ಈತನಿಗೆ ತಿಳಿದುಬಂದಿದೆ.
ಪ್ರಕರಣ ಸಂಬಂಧ ಪೊಲೀಸರು ಮ್ಯಾಚ್‌ಮೇಕರ್ ಲೀ ಸೇರಿದಂತೆ ಐವರನ್ನು ಬಂಧಿಸಿದ್ದಾರೆ.