ಅಲಹಾಬಾದ್: ಪತಿಯ ತಂದೆ-ತಾಯಿ ಅಥವಾ ಅತ್ತೆ-ಮಾವನನ್ನು ಆರೈಕೆ ಮಾಡುವಲ್ಲಿ ಪತ್ನಿ ವಿಫಲವಾದ ಮಾತ್ರಕ್ಕೆ ಅದನ್ನು ಕ್ರೌರ್ಯ ಎಂದು ಹೇಳಲಾಗದು ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಪತಿ ಮಹಾಶಯನೊಬ್ಬ ಪತ್ನಿ, ತನ್ನ ತಂದೆ-ತಾಯಿಯನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದ. ತನ್ನ ಮನವಿಯನ್ನು ತಿರಸ್ಕರಿಸಿದ್ದ ಕೆಳ ನ್ಯಾಯಾಲಯದ ಆದೇಶ ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಮೆಟ್ಟಿಲೇರಿದ್ದ. ಇದೀಗ ಹೈಕೋರ್ಟ್ ಕೂಡ ಆತನ ಅರ್ಜಿಯನ್ನು ವಜಾಗೊಳಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಸೌಮಿತ್ರ ದಯಾಲ್ ಸಿಂಗ್ ಹಾಗೂ ಡಿ.ರಮೇಶ್ ಅವರಿದ್ದ ವಿಭಾಗೀಯ ಪೀಠ, ವಿವಾಹದ ನಂತರ ಅತ್ತೆ-ಮಾವನ ಮನೆಯಿಂದ ದೂರವಿರಲು ನಿರ್ಧರಿಸಿದ ಸಂದರ್ಭದಲ್ಲಿ ವಯಸ್ಸಾದ ಪಾಲಕರ ಆರೈಕೆಯನ್ನು ಪತ್ನಿ ಸರಿಯಾಗಿ ಮಾಡಿಲ್ಲ ಎಂಬುದು ಕ್ರೌರ್ಯವಾಗದು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಪ್ರತಿಯೊಂದು ಕುಟುಂಬದಲ್ಲಿನ ನಿರ್ದಿಷ್ಟ ಸನ್ನಿವೇಶಗಳನ್ನು ಪರಿಶೀಲನೆ ನಡೆಸುವುದು ಅಥವಾ ಇಂತಹ ವಿಚಾರಗಳಿಗೆ ಸಂಬಂಧಿಸಿದಂತೆ ಕಾಯ್ದೆ, ತತ್ವಗಳನ್ನು ರೂಪಿಸುವುದು ಕೋರ್ಟ್ ಕೆಲಸವಲ್ಲ. ಕೌಟುಂಬಿಕ ಕ್ರೌರ್ಯವು ವಿಚ್ಛೇದನ ನೀಡುವುದಕ್ಕೆ ಕಾರಣವೆನಿಸಿದರೂ ಕ್ರೌರ್ಯವನ್ನು ನಿರ್ಧಿಷ್ಟ ಚೌಕಟ್ಟಿನಲ್ಲಿ ವ್ಯಾಖ್ಯಾನ ಮಾಡುವುದಕ್ಕೆ ಸಿದ್ಧಸೂತ್ರವಿಲ್ಲ. ಈ ಪ್ರಕರಣ ಕ್ರೌರ್ಯ ಎಂದು ಹೇಳಲು ಆಗದು ಎಂದು ತಿಳಿಸಿದೆ.
ನೌಕರಿಗಾಗಿ ತಾನು ಬೇರೆ ಉರಿನಲ್ಲಿದ್ದೆ. ಹೀಗಾಗಿ ವಯಸ್ಸಾದ ತನ್ನ ತಂದೆ-ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ತನ್ನ ಪತ್ನಿಗೆ ವಹಿಸಿದ್ದೆ. ಆದರೆ ಪತ್ನಿ ನನ್ನ ಪಾಲಕರ ಆರೈಕೆಯನ್ನು ಸರಿಯಾಗಿ ಮಾಡಿಲ್ಲ. ಅಲ್ಲದೆ ಆಕೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಇದು ಕ್ರೌರ್ಯಕ್ಕೆ ಸಮಾನ ಎಂದು ಪತ್ನಿ ದೂರಿದ್ದ. ಆದರೆ ದೂರುದಾರ ಪತಿ, ಪತ್ನಿ ತನ್ನ ಪಾಲಕರ ಆರೈಕೆ ಮಾಡುವಲ್ಲಿ ಯಾವ ರೀತಿ ನಿರೀಕ್ಷೆಯನ್ನು ಇಟ್ಟುಕೊಂಡಿದ್ದ ಎಂಬುದನ್ನು ಹೇಳಿಲ್ಲ, ಅಲ್ಲದೇ ಪತ್ನಿ ಕ್ರೂರವಾಗಿ, ಅಮಾನವೀಯವಾಗಿ ವರ್ತಿಸಿದ್ದಾಳೆ ಎಂಬುದನ್ನು ಎಲ್ಲೂ ಸಾಬೀತುಪಡಿಸಿಲ್ಲ ಎಂದು ಅರ್ಜಿ ವಜಾಗೊಳಿಸಿದೆ.