ಅಕ್ರಮ ಸಂಬಂಧ ಹೊಂದಿದ್ದ ಪತ್ನಿಯು ತನ್ನ ಪ್ರೇಮಿ ಹಾಗೂ ಆತನ ಸ್ನೇಹಿತನ ಸಹಾಯದಿಂದ ಪತಿಯನ್ನು ಬರ್ಬರವಾಗಿ ಕೊಲೆಗೈದ ಸಿನಿಮೀಯ ಘಟನೆಯೊಂದು ಮಧ್ಯಪ್ರದೇಶದ ಗ್ವಾಲಿಯರ್ನಲ್ಲಿ ಬೆಳಕಿಗೆ ಬಂದಿದೆ. ತಾನೇ ಪತಿಯನ್ನ ಕೊಂದಿದ್ದರೂ ಸಹ ಪೊಲೀಸ್ ಠಾಣೆಯಲ್ಲಿ ಪತಿ ಕಾಣೆಯಾಗಿದ್ದಾನೆ ಎಂದು ದೂರು ನೀಡುವ ಮೂಲಕ ಈಕೆ ಬರೋಬ್ಬರಿ 11 ತಿಂಗಳುಗಳ ಕಾಲ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದಾಳೆ.
11 ತಿಂಗಳಾದರೂ ಪ್ರಕರಣ ಭೇದಿಸಲು ಸಾಧ್ಯವಾಗದ್ದಕ್ಕೆ ಕೋರ್ಟ್ ಕೂಡ ಪೊಲೀಸರ ಮೇಲೆ ಬೇಸರ ವ್ಯಕ್ತಪಡಿಸಿತ್ತು. ಆದರೆ ಇದೀಗ ಈ ಸಿನಿಮೀಯ ಪ್ರಕರಣವನ್ನ ಭೇದಿಸಿ ಪತ್ನಿಯ ಕಳ್ಳಾಟವನ್ನು ಬಯಲಿಗೆ ಎಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಸ್ತಿನಾಪುರದ ಚಪರೋಲಿ ಮೌಜಾದ ಒಂದು ಜಮೀನಿನ ಹಳೆಯ ಬಾವಿಯಲ್ಲಿ ಮೃತ ಪತಿಯ ಅಸ್ಥಿಪಂಜರ ಪತ್ತೆಯಾಗಿದೆ. ಆರೋಪಿಗಳು ಹಳೆ ಬಾವಿಯಲ್ಲಿ ಮೃತದೇಹವನ್ನು ಎಸೆದ ಬಳಿಕ ಅದರ ಮೇಲೆ ಮರದ ಕಾಂಡವನ್ನ ಹಾಕಿ ಬಳಿಕ ಮಣ್ಣು ಮುಚ್ಚಿ ಒಂದು ಸಸಿಯನ್ನ ನೆಟ್ಟಿದ್ದರು. ಈ 11 ತಿಂಗಳಲ್ಲಿ ಸಸಿ ಕೂಡ ಮರವಾಗಿ ಬೆಳೆದಿತ್ತು. ಪೊಲೀಸರು ಆರೋಪಿ ಪತ್ನಿ, ಆಕೆಯ ಪ್ರೇಮಿಯನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಇನ್ನೋರ್ವ ನಾಪತ್ತೆಯಾಗಿದ್ದಾನೆ.
ಭಿತರವಾರ್ನ ಮೋಹನ್ಗಢದನಿವಾಸಿ ಫೇಎನ್ ಸಿಂಗ್ ಜಾಠವ್ 11 ತಿಂಗಳ ಹಿಂದೆ ಅಂದರೆ ಕಳೆದ ವರ್ಷ ಆಗಸ್ಟ್ 6ರಂದು ನಾಪತ್ತೆಯಾಗಿದ್ದರು. ಇದಾದ ಬಳಿಕ ಪತ್ನಿ ಮಾಲತಿ ಭಿತರ್ವಾರ್ ಠಾಣೆಯಲ್ಲಿ ಪತಿ ಕಾಣೆಯಾಗಿದ್ದಾರೆ ಎಂದು ದೂರು ದಾಖಲಿಸಿದ್ದಳು.