ಮೈಸೂರು: ಆಸ್ತಿ ಆಸೆಗಾಗಿ ಇಲ್ಲೋರ್ವ ವ್ಯಕ್ತಿ ಮೊದಲ ಪತ್ನಿ ಮಕ್ಕಳ ಜೊತೆ ಸೇರಿ ಎರಡನೇ ಹೆಂಡತಿಯನ್ನೇ ಬರ್ಬರವಾಗಿ ಹತ್ಯೆಗೈದಿರುವ ಘಟನೆ ನಡೆದಿದೆ.
ಮೈಸೂರಿನ ನಾಯ್ಡು ನಗರದಲ್ಲಿ ಈ ಘಟನೆ ನಡೆದಿದೆ. ಪ್ರಕರಣ ಸಂಬಂಧ ನಾಲ್ವರು ಆರೋಪಿಗಳನ್ನು ಪೊಲೀಸರು ಬಧಿಸಿದ್ದಾರೆ. ಮೃತರನ್ನು ಅಖಿಲಾ ಬಾನು (46) ಎಂದು ಗುರುತಿಸಲಾಗಿದೆ.
ಆರೋಪಿ ಪತಿ ಅಬ್ಬ ಥಾಯೂಬ್, ಮೊದಲ ಹೆಂಡತಿ ಮಕ್ಕಳಾದ ಮೊಹಮ್ಮದ್ ಆಸಿಫ್, ಮೊಹಮ್ಮದ್ ಥೋಸಿಫ್, ಮೊಹಮ್ಮದ್ ಹೈದರ್ ನನ್ನು ಬಂಧಿಸಲಾಗಿದೆ.
ಸಿಲ್ಕ್ ಫ್ಯಾಕ್ಟರಿ ನೌಕರನಾಗಿದ್ದ ಅಬ್ಬ ಥಾಯೂಬ್ 2013ರಲ್ಲಿ ಅಖಿಲಾ ಬಾನು ಎಂಬುವವರನ್ನು 2ನೇ ವಿವಾಹವಾಗಿದ್ದ. ಮೊದಲ ಪತ್ನಿಗೆ ನಾಲ್ಕು ಮಕ್ಕಳಿದ್ದರು. ಎರಡನೇ ಪತ್ನಿ ಅಖಿಲಾ ಬಾನು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಚಿಕಿತ್ಸೆ ಬಳಿಕ ಗುಣಮುಖರಾಗಿದ್ದರು. ಆದರೆ ಆಕೆಗೆ ಮಕ್ಕಳಿರಲಿಲ್ಲ. ಅಖಿಲಾ ಬಾನು ಅಕ್ಕನ ಮಗ ಇತ್ತೀಚೆಗೆ ಆಕೆಗಾಗಿ ಆರ್ಥಿಕ ನೆರವು ನೀಡಿ ನಾಯ್ಡು ನಗರದಲ್ಲಿ ಮನೆಯೊಂದನ್ನು ಕೊಡಿಸಿದ್ದ. ಅಖಿಲಾ ಹಾಗೂ ಥಾಯೂಬ್ ಇಬ್ಬರ ಹೆಸರಲ್ಲಿಯೂ ಮನೆ ನೋಂದಣಿಯಾಗಿತ್ತು.
ಕೆಲ ದಿನಗಳ ಹಿಂದೆ ಅಬ್ಬ ಥಾಯೂಬ್ ತನ್ನ ಮೊದಲ ಪತ್ನಿ ಮಕ್ಕಳಿಗೆ ಮನೆ ಬರೆದುಕೊಡಲು ಮುಂದಾಗಿದ್ದ. ಇದಕ್ಕೆ ಅಖಿಲಾ ಬಾನು ವಿರೋಧಿಸಿದ್ದಳು. ಇದೇ ವಿಚಾರವಾಗಿ ಪತಿ-ಪತ್ನಿ ನಡುವೆ ಜಗಳ ಶುರುವಾಗಿದೆ. ಫೆ.16ರಂದು ಏಕಾಏಕಿ ಅಖಿಲಾ ಬಾನು ಮೃತಪಟ್ಟಿದ್ದಾಗಿ ಆಕೆಯ ಅಕ್ಕನ ಮಗ ಸೈಯ್ಯದ್ ಇರ್ಫಾನ್ ಮುಂದೆ ಕಣ್ಣೀರಿಟ್ಟಿದ್ದ. ಆತ ಬಂದು ಪರಿಶೀಲಿಸಿದಾಗ ಮೃತದೇಹದ ಕತ್ತಿನ ಭಾಗದಲ್ಲಿ ಗಾಯಗಳಿದ್ದವು. ಈ ಹಿನ್ನೆಲೆಯಲ್ಲಿ ಅಖಿಲಾ ಬಾನುಳನ್ನು ಕೊಲೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಬ್ಬ ಥಾಯೂಬ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ.