ವಿಡಿಯೋ ಕಾಲ್ ಮಾಡಿ ಮನೆ ಸ್ವಚ್ಛತೆ ಬಗ್ಗೆ ಸಾಕ್ಷ್ಯ ಕೇಳ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅರ್ಜಿದಾರರಿಗೆ ಪರಿಹಾರ ನೀಡಲು ಬಾಂಬೆ ಹೈಕೋರ್ಟ್ ನಿರಾಕರಿಸಿದೆ. ಎಫ್ ಐ ಆರ್ ರದ್ದು ಹಾಗೂ ಕ್ರಿಮಿನಲ್ ಕೇಸ್ ರದ್ದಿಗೆ ಕೋರಿ, ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಚೆಂಬೂರ್ ನಿವಾಸಿ, ಆತನ ತಂದೆ ಹಾಗೂ ಮೂವರು ಸಹೋದರಿಯರ ವಿರುದ್ಧ ಪತ್ನಿ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಇವರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಅದನ್ನು ರದ್ದು ಮಾಡುವಂತೆ ಚೆಂಬೂರ್ ನಿವಾಸಿ, ಪೀಡಿತೆ ಪತಿ ಅರ್ಜಿ ಸಲ್ಲಿಸಿದ್ದ. ಅದನ್ನು ಕೋರ್ಟ್ ವಜಾಗೊಳಿಸಿದೆ. ಇದನ್ನು ಹಿಂಸೆ, ವರದಕ್ಷಿಣೆ ಕಿರುಕುಳವೆಂದು ಹೇಳಲು ಹಾಗೂ ದೂರುದಾರಳ ಜೀವಕ್ಕೆ ಅಪಾಯವಿದೆ ಎನ್ನಲು ಸಾಕಷ್ಟು ಸಾಕ್ಷ್ಯವಿದೆ ಎಂದು ಕೋರ್ಟ್ ಹೇಳಿದೆ.
ಡಿಸೆಂಬರ್ 2021ರಲ್ಲಿ ಮದುವೆಯಾಗಿದ್ದ ಮಹಿಳೆಗೆ ಪತಿ ಹಾಗೂ ಆತನ ಮೂವರು ಸಹೋದರಿಯರಿಂದ ಚಿತ್ರಹಿಂಸೆಯಾಗಿತ್ತು. ಮದುವೆಯಾಗಿ ಗಂಡನ ಮನೆ ಸೇರಿದ್ದ ನಾದಿನಿಯರು, ವಿಡಿಯೋ ಕಾಲ್ ಮಾಡುತ್ತಿದ್ದರು. ಮನೆಯ ಸ್ವಚ್ಛತೆಯನ್ನು ಅವರು ವಿಡಿಯೋ ಕಾಲ್ ಮೂಲಕ ಪರಿಶೀಲನೆ ನಡೆಸುತ್ತಿದ್ದರು. ಅಷ್ಟೇ ಅಲ್ಲದೆ ಅಡುಗೆಯನ್ನು ತಾವೇ ನಿರ್ಧರಿಸುತ್ತಿದ್ದರು. ಸಹೋದರನಿಗೆ ಅತ್ತಿಗೆ ಬಗ್ಗೆ ದೂರು ಹೇಳ್ತಿದ್ದರು. 2022 ಅಕ್ಟೋಬರ್ ನಲ್ಲಿ ಮನೆಗೆ ಬಂದ ಸಹೋದರಿಯರು, ಅತ್ತಿಗೆಯನ್ನು ಮನೆಯಿಂದ ಹೊರಗೆ ಹಾಕಿದ್ದರು. ಆಭರಣ ಮತ್ತು ಬಟ್ಟೆ ನೀಡಲು ನಿರಾಕರಿಸಿದ್ದರು. ಸಹೋದರಿಯರ ಮಾತು ಕೇಳಿ ಪತಿ ಕೂಡ ಹಿಂಸೆ ನೀಡುತ್ತಿದ್ದ. ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು. ಪತಿ ಹಾಗೂ ಸಹೋದರಿಯರ ವಿರುದ್ಧ ಎಫ್ ಐಆರ್ ದಾಖಲಾಗಿತ್ತು. ಅದನ್ನು ರದ್ದುಗೊಳಿಸುವಂತೆ ಪತಿ ಕೋರ್ಟ್ ಮೆಟ್ಟಿಲೇರಿದ್ದ.