ಯಾದಗಿರಿ: ಬುದ್ಧಿ ಹೇಳಲು ಬಂದವರ ಮೇಲೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮತ್ತಿಬ್ಬರು ಸಾವನ್ನಪ್ಪಿದ್ದಾರೆ.
ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮತ್ತಿಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರೊಂದಿಗೆ ಬುದ್ಧಿ ಹೇಳಲು ಬಂದಿದ್ದ ನಾಲ್ವರು ಕೂಡ ಸಾವನ್ನಪ್ಪಿದ್ದಾರೆ. ನಿನ್ನೆ ಇಬ್ಬರು, ಇಂದು ಮತ್ತಿಬ್ಬರು ಮೃತಪಟ್ಟಿದ್ದಾರೆ.
ಯಾದಗಿರಿ ಜಿಲ್ಲೆ ಹುಣಸಗಿ ತಾಲೂಕಿನ ನಾರಾಯಣಪುರದಲ್ಲಿ ನಿನ್ನೆ ಅಮಾನವೀಯ ಘಟನೆ ನಡೆದಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಬುದ್ಧಿ ಹೇಳಲು ಸಂಬಂಧಿಕರು ಬಂದಿದ್ದರು. ಈ ವೇಳೆ ಮನೆಗೆ ಬೀಗ ಹಾಕಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲಾಗಿತ್ತು. ಪೊಲೀಸರು ಆರೋಪಿ ಶರಣಪ್ಪನನ್ನು ನಿನ್ನೆಯೇ ಬಂಧಿಸಿದ್ದಾರೆ. ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಜೆಸಿಬಿ ಚಾಲಕನಾಗಿರುವ ಶರಣಪ್ಪ ಬಂಧಿತ ಆರೋಪಿ. ಈತನ ಪತ್ನಿ ಹುಲಿಗೆಮ್ಮ ಕೆಎಸ್ಆರ್ಟಿಸಿ ಮೆಕಾನಿಕ್ ಆಗಿದ್ದಾರೆ. 14 ತಿಂಗಳಿಂದ ದಂಪತಿ ಪ್ರತ್ಯೇಕವಾಗಿ ವಾಸವಾಗಿದ್ದು, ಶರಣಪ್ಪ ವಿಚ್ಛೇದನಕ್ಕೆ ಒತ್ತಾಯಿಸಿದ್ದ. ಹುಲಿಗೆಮ್ಮ ವಿಚ್ಛೇದನ ಕೊಡಲು ನಿರಾಕರಿಸಿದ್ದರು. ಸಂಧಾನಕ್ಕೆ ಕರೆದಿದ್ದ ಶರಣಪ್ಪ ಪತ್ನಿಯ ತಂದೆ, ಅಳಿಯ, ಮಾವ ಹಾಗೂ ಅಣ್ಣ ಮನೆಯಲ್ಲಿದ್ದ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿದ್ದು, ನಿನ್ನೆ ಇಬ್ಬರು ಇಂದು ಮತ್ತಿಬ್ಬರು ಸಾವನ್ನಪ್ಪಿದ್ದಾರೆ.