ಉತ್ತರ ಪ್ರದೇಶದ ಸಹರಾನ್‌ಪುರ ಜಿಲ್ಲೆಯ ಗಂಗೋಹ್ ಪ್ರದೇಶದಲ್ಲಿ ವರದಕ್ಷಿಣೆ ಕಿರುಕುಳದ ಭಯಾನಕ ಘಟನೆ ಬೆಳಕಿಗೆ ಬಂದಿದೆ. ವರದಕ್ಷಿಣೆಯ ಬೇಡಿಕೆ ಈಡೇರಿಸದ ಕಾರಣ ಪತಿಯು ತನ್ನ ಪತ್ನಿಗೆ ಹೆಚ್‌ಐವಿ ಸೋಂಕಿತ ಚುಚ್ಚುಮದ್ದು ನೀಡಿದ್ದಾನೆ.
ಪಿಡಿತ ಮಹಿಳೆಯ ತಂದೆ ಪ್ರಕಾರ, ಅವರು ತಮ್ಮ ಮಗಳನ್ನು ಫೆಬ್ರವರಿ 2023 ರಲ್ಲಿ ಹರಿದ್ವಾರದ ಯುವಕನೊಂದಿಗೆ ವಿಜೃಂಭಣೆಯಿಂದ ವಿವಾಹ ಮಾಡಿಕೊಟ್ಟಿದ್ದರು.
ಮದುವೆಯಲ್ಲಿ ಕಾರು, 15 ಲಕ್ಷ ರೂಪಾಯಿ ನಗದು ಮತ್ತು ಲಕ್ಷಾಂತರ ಮೌಲ್ಯದ ಆಭರಣಗಳನ್ನು ನೀಡಲಾಗಿತ್ತು. ಆದರೂ, ವರನ ಕಡೆಯವರು ಇದರಿಂದ ತೃಪ್ತರಾಗಲಿಲ್ಲ ಮತ್ತು ಮದುವೆಯ ನಂತರ ಸ್ಕಾರ್ಪಿಯೋ ಮತ್ತು 25 ಲಕ್ಷ ರೂಪಾಯಿ ನಗದು ವರದಕ್ಷಿಣೆಯನ್ನು ಹೆಚ್ಚುವರಿಯಾಗಿ ಬೇಡಿದ್ದರು.
ಪಿಡಿತ ಮಹಿಳೆಯ ತಂದೆ ಹೆಚ್ಚಿನ ವರದಕ್ಷಿಣೆ ನೀಡಲು ನಿರಾಕರಿಸಿದಾಗ, ಪತಿ ಮತ್ತು ಆತನ ಕುಟುಂಬ ಸದಸ್ಯರು ಆಕೆಯನ್ನು ಕಿರುಕುಳಪಡಿಸಲು ಪ್ರಾರಂಭಿಸಿದರು. ಆಕೆ ಮೇಲೆ ಹಲ್ಲೆ ನಡೆಸಲಾಯಿತು ಮತ್ತು ಮನೆಯಿಂದ ಹೊರಹಾಕಲಾಯಿತು.
ಕೆಲ ಸಮಯದ ನಂತರ, ಸಮಾಜದ ಹಿರಿಯರ ಒತ್ತಡದಿಂದ ಆಕೆಯನ್ನು ಗಂಡನ ಮನೆಗೆ ಕಳುಹಿಸಲಾಗಿದ್ದು ಆದರೆ, ಅಲ್ಲಿಯೂ ಆಕೆಯ ಕಿರುಕುಳ ಮುಂದುವರೆಯಿತು. ಆಕೆಯ ಗಂಡ ಮತ್ತು ಮನೆಯವರು ಆಕೆಯನ್ನು ಕೊಲ್ಲುವ ಉದ್ದೇಶದಿಂದ ಕೆಲವು ಔಷಧಿಗಳನ್ನು ನೀಡಿದರು ಮತ್ತು ಹೆಚ್‌ಐವಿ ಸೋಂಕಿತ ಚುಚ್ಚುಮದ್ದನ್ನು ನೀಡಿದರು ಎಂದು ಆರೋಪಿಸಲಾಗಿದೆ.
ವಿಷಯ ತಿಳಿದುಬಂದ ತಕ್ಷಣ, ಆಕೆಯ ಕುಟುಂಬ ಸದಸ್ಯರು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದು, ಅಲ್ಲಿ ಆಕೆಗೆ ಹೆಚ್‌ಐವಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಆದರೆ, ಪತಿಯ ಪರೀಕ್ಷೆಯಲ್ಲಿ ಹೆಚ್‌ಐವಿ ನೆಗೆಟಿವ್ ಎಂದು ಕಂಡುಬಂದಿದೆ.
ನಂತರ, ಪೀಡಿತ ಮಹಿಳೆಯ ತಂದೆ ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯಾಲಯದ ಆದೇಶದ ಮೇರೆಗೆ, ಗಂಗೋಹ್ ಪೊಲೀಸ್ ಠಾಣೆಯಲ್ಲಿ ಆರೋಪಿ ಪತಿ ಮತ್ತು ಆತನ ಕುಟುಂಬ ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಮತ್ತು ತನಿಖೆ ಪ್ರಾರಂಭಿಸಲಾಗಿದೆ.