ಕೋರ್ಟ್ ಆವರಣದಲ್ಲಿ ಪತ್ನಿಯ ಮೇಲೆ ಪತಿ ಗಂಭೀರವಾಗಿ ಹಲ್ಲೆ ನಡೆಸಿದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದಿದೆ. ನನಗುಂಡಿಕೊಪ್ಪದ ನಿವಾಸಿ ನಿವೃತ್ತ ಸೈನಿಕ ಶಿವಪ್ಪ ಅಡಕಿ ಎಂಬವರು ಬೈಲಹೊಂಗಲ ಕೋರ್ಟ್ನ ಆವರಣದಲ್ಲಿ ಮಚ್ಚಿನಿಂದ ಪತ್ನಿಯ ಕಾಲನ್ನು ಕತ್ತರಿಸಿದ್ದಾರೆ.
11 ವರ್ಷಗಳ ಹಿಂದೆ ಜಯಮಾಲಾ ಎಂಬವರನ್ನು ಮದುವೆಯಾಗಿದ್ದ ಶಿವಪ್ಪ ದಂಪತಿ ನಡುವೆ ಹಣಕಾಸಿನ ವಿಚಾರವಾಗಿ ಕಲಹ ಏರ್ಪಟ್ಟಿತ್ತು . ಈ ಕಲಹ ನ್ಯಾಯಾಲಯದ ಮೆಟ್ಟಿಲನ್ನೂ ಏರಿತ್ತು. ಇಂದು ವಿಚಾರಣೆ ಹಿನ್ನೆಲೆ ಪತ್ನಿ ಜಯಮಾಲಾ ಹಾಗೂ ಪತಿ ಶಿವಪ್ಪ ಕೋರ್ಟ್ಗೆ ಹಾಜರಾಗಿದ್ದರು. ಈ ವೇಳೆಯಲ್ಲಿ ಕೋರ್ಟ್ ಆವರಣದಲ್ಲಿ ನಿಂತಿದ್ದ ಪತ್ನಿಯ ಕಾಲನ್ನು ಶಿವಪ್ಪ ಮಚ್ಚಿನಿಂದ ಕತ್ತರಿಸಿದ್ದಾರೆ.
ಹಲ್ಲೆಯ ಬಳಿಕ ಜಯಮಾಲಾ ಸ್ಥಿತಿ ಗಂಭೀರವಾಗಿದೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಜಯಮಾಲಾರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಶಿವಪ್ಪನನ್ನು ಪೊಲೀಸರು ಬಂಧಿಸಿದ್ದಾರೆ.