
ಮಂಗಳೂರು: ಪತ್ನಿ ಮೇಲೆ ಹಲ್ಲೆ ಮಾಡಿ ಬಲವಂತವಾಗಿ ವಿಷ ಪದಾರ್ಥ ನೀಡಿ ಕೊಲೆಗೈದ ಆರೋಪಿಗೆ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಶತ್ರು ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಉಳ್ಳಾಲ ತಾಲೂಕಿನ ಸೋಮೇಶ್ವರ ಗ್ರಾಮದ ಕುಂಪಲ ಚೇತನ ನಗರದ ಜೋಸೆಫ್ ಫ್ರಾನ್ಸಿಸ್ ರೆನ್ಸನ್(53) ಶಿಕ್ಷೆಗೋಳಗಾದ ವ್ಯಕ್ತಿ. ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಸಂಧ್ಯಾ ಎಸ್. ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.
2022ರ ಮೇ 11ರಂದು ಮಧ್ಯಾಹ್ನ ಆರೋಪಿ ತನ್ನ ಪತ್ನಿ ಶೈಮಾ ಅವರ ಮೇಲೆ ಹಲ್ಲೆ ನಡೆಸಿ ವಿಷ ಪದಾರ್ಥ ನೀಡಿ ಕೊಲೆ ಮಾಡಿದ ಆರೋಪದ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು. ದುಶ್ಚಟ ಬಿಡುವಂತೆ ಹೇಳುತ್ತಿದ್ದರಿಂದ ಕುಪಿತಗೊಂಡ ಆರೋಪಿ ಕೃತ್ಯವೆಸಗಿದ್ದ. ಪತ್ನಿಯ ಮೇಲೆ ಲಟ್ಟಣಿಗೆಯಿಂದ ಹಲ್ಲೆ ಮಾಡಿ ಗೋಡೆಗೆ ದೂಡಿದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೇಳೆ ವಿಷ ಪದಾರ್ಥ ನೀಡಿ ಆತ್ಮಹತ್ಯೆಗೆ ಯತ್ನ ಎಂದು ಬಿಂಬಿಸಲು ಯತ್ನಿಸಿದ್ದ. ಇಬ್ಬರು ಪುತ್ರರು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಶೈಮಾ ಅವರನ್ನು ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅದೇ ದಿನ ರಾತ್ರಿ ಮೃತಪಟ್ಟಿದ್ದರು.
ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗೆ ಜೀವಾವಧಿ ಶಿಕ್ಷೆ ಹಾಗೂ 35 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಮೃತರ ವಾರಸುದಾರರ ತಂದೆ ಮತ್ತು ಇಬ್ಬರು ಮಕ್ಕಳಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಆದೇಶಿಸಿದೆ. ಸರ್ಕಾರದ ಪರವಾಗಿ ಮೋಹನ್ ಕುಮಾರ್ ಬಿ. ವಾದ ಮಂಡಿಸಿದ್ದರು.