
ಎರಡು ವಾರಗಳ ಹಿಂದೆ ಟರ್ಕಿ ಮತ್ತು ಸಿರಿಯಾದಲ್ಲಿ ನಡೆದ 7.8 ತೀವ್ರತೆಯ ಭೂಕಂಪದಿಂದ ಸಹಸ್ರಾರು ಮಂದಿ ಜೀವ ಕಳೆದುಕೊಂಡಿದ್ದು, ಲಕ್ಷಾಂತರ ಮಂದಿ ನಿರ್ವಸಿತರಾಗಿದ್ದಾರೆ. ಇದುವರೆಗೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಲೇ ಇದೆ.
ಘಟನೆ ನಡೆದು 12 ದಿನಗಳಾಗಿದ್ದು, ಇದೀಗ ಟರ್ಕಿಯ ಅಂಟಾಕ್ಯಾದಲ್ಲಿನ ಅವಶೇಷಗಳಿಂದ ದಂಪತಿ ಮತ್ತು ಅವರ ಮಗನನ್ನು ರಕ್ಷಣಾ ತಂಡವು ಹೊರಕ್ಕೆ ತೆಗೆದಿದೆ. ಆದರೆ ಹೊರಕ್ಕೆ ಬರುತ್ತಿದ್ದಂತೆಯೇ ಮಗ ಸಾವನ್ನಪ್ಪಿದ್ದಾನೆ.
ಸಮೀರ್ ಮುಹಮ್ಮದ್ ಅಕರ್ (49), ಅವರ ಪತ್ನಿ ರಗ್ದಾ (40) ಮತ್ತು ಅವರ 12 ವರ್ಷದ ಮಗನನ್ನು ಅಪಾರ್ಟ್‌ಮೆಂಟ್ ಬ್ಲಾಕ್ ಅಡಿಯಿಂದ ಹೊರಕ್ಕೆ ತೆಗೆಯಲಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಗ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಅವರ ಇತರ ಇಬ್ಬರು ಮಕ್ಕಳ ಶವಗಳು ಅವಶೇಷಗಳಲ್ಲಿ ಪತ್ತೆಯಾಗಿವೆ.
ಕುತೂಹಲದ ಸಂಗತಿ ಎಂದರೆ, ಸಮೀರ್ ಅವರು ಜೀವಂತವಾಗಿರಲು ಇಷ್ಟೂ ದಿನಗಳವರೆಗೆ ಮೂತ್ರವನ್ನು ಸೇವಿಸಿದ್ದೆ ಎಂದು ಹೇಳಿದ್ದಾರೆ. 12 ದಿನ ಸುಮಾರು 296 ಗಂಟೆಗಳ ಕಾಲ ಮೂತ್ರವೇ ತಮ್ಮನ್ನು ಕಾಪಾಡಿದ್ದುದ್ದಾಗಿ ಹೇಳಿದ್ದಾರೆ.