ಕೋಲ್ಕತ್ತಾ: ಪಶ್ಚಿಮ ಬಂಗಾಳದ ಉತ್ತರ 24 ಪರಗಣದ ಬಸಿರ್ ಹತ್ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಮಹಿಳೆ ಮೇಲೆ ಆಕೆಯ ಅತ್ತೆಯ ಮನೆಯಲ್ಲಿ ಅದರಲ್ಲೂ ಪತಿ ಸಮ್ಮುಖದಲ್ಲಿ ಇಬ್ಬರು ಕುಟುಂಬ ಸದಸ್ಯರು ಅತ್ಯಾಚಾರ ಎಸಗಿದ್ದಾರೆ.
ಪತ್ನಿ ಪೊಲೀಸರಿಗೆ ದೂರು ನೀಡಿದ್ದು, ಒತ್ತಡ ಹೇರಿದರೂ ಕೇಸ್ ಹಿಂಪಡೆಯದೇ ಇದ್ದಾಗ ಪತಿ ಆಸಿಡ್ ದಾಳಿ ಮಾಡಿ ಕೊಲ್ಲಲು ಪ್ರಯತ್ನಿಸಿದ್ದಾನೆ. ಬಸಿರ್ ಹತ್ ವಿಭಾಗದ ಹರೋವಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಸಿರಾಜುಲ್ ಮುಲ್ಲಾ(20) ಎಂಬಾತ 18 ವರ್ಷದ ಯುವತಿಯನ್ನು ಮದುವೆಯಾಗಿದ್ದ. ಮದುವೆ ಸಂದರ್ಭದಲ್ಲಿ ಚಿನ್ನಾಭರಣ ಹಾಗೂ ಮನೆ ನಿರ್ಮಾಣಕ್ಕೆ ವರದಕ್ಷಿಣೆಯಾಗಿ 10 ಲಕ್ಷ ರೂ.ಗೂ ಹೆಚ್ಚು ಹಣ ಪಡೆದಿದ್ದ ಎಂದು ಯುವತಿಯ ತಂದೆ ಆರೋಪಿಸಿದ್ದಾರೆ.
ಮದುವೆಯಾದ ಮೊದಲ ಮೂರು ತಿಂಗಳು ಚೆನ್ನಾಗಿದ್ದ ಪತಿ ಸಿರಾಜುಲ್ ನಂತರ ಮತ್ತೆ 5 ಲಕ್ಷ ರೂ. ವರದಕ್ಷಿಣೆಗೆ ಬೇಡಿಕೆ ಇಟ್ಟು, ಪತ್ನಿಗೆ ಕಿರುಕುಳ ನೀಡಿದ್ದಾನೆ. ವರದಕ್ಷಿಣೆಗಾಗಿ ಪತಿ ಮತ್ತು ಅತ್ತೆ ತನಗೆ ದೈಹಿಕವಾಗಿ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ನೊಂದ ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
ಗಂಡನ ಮನೆಯವರು ಹಲವು ಬಾರಿ ಸೀಮೆಎಣ್ಣೆ ಸುರಿದು ಸುಟ್ಟು ಹಾಕಲು ಯತ್ನಿಸಿದ್ದರು. ಪತಿ ಮತ್ತು ಕುಟುಂಬದ ಇಬ್ಬರು ಮನೆಯಲ್ಲಿ ಮದ್ಯಪಾನ ಮಾಡಿ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆ. ಘಟನೆಯ ನಂತರ ಹರೋವಾ ಪೊಲೀಸರಿಗೆ ಲಿಖಿತ ದೂರು ನೀಡಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.