ಕಲಬುರ್ಗಿ ಜಿಲ್ಲೆ ಆಳಂದ ತಾಲೂಕಿನ ನಿಂಬರ್ಗಾ ಠಾಣೆ ಪೊಲೀಸರು ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಕೊಲೆ ಮಾಡಿದ್ದ ಪತ್ನಿ ಹಾಗೂ ಆಕೆಯ ಪ್ರಿಯಕರ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಫೆಬ್ರವರಿ 16 ರಂದು ನಿಂಬರ್ಗಾ ಪೊಲೀಸ್ ಠಾಣೆ ವ್ಯಾಪ್ತಿಯ ಸ್ಟೇಷನ್ ಗಾಣಗಾಪುರ ಸಮೀಪ ಹೊಲದಲ್ಲಿ ಧಂಗಾಪುರದ ರವಿ(35) ಮೃತದೇಹ ಕಂಡು ಬಂದಿದೆ. ಯಾರೋ ಅಪರಿಚಿತರು ಗಂಡನನ್ನು ಕೊಲೆ ಮಾಡಿರುವುದಾಗಿ ಆತನ ಪತ್ನಿ ಪೊಲೀಸರಿಗೆ ದೂರು ನೀಡಿದ್ದಾಳೆ. ತನಿಖೆ ಕೈಗೊಂಡ ಪೊಲೀಸರು ಕೊಲೆ ರಹಸ್ಯ ಬಯಲಿಗೆಳೆದಿದ್ದಾರೆ.
ಮೃತ ರವಿ ಪತ್ನಿಯೇ ಪ್ರಿಯಕರನೊಂದಿಗೆ ಸೇರಿ ಗಂಡನನ್ನು ಕೊಲೆ ಮಾಡಿರುವುದು ತನಿಖೆಯಲ್ಲಿ ಗೊತ್ತಾಗಿದೆ. ಪತ್ನಿ ಹುಚ್ಚಪ್ಪ ಎಂಬುವನೊಂದಿಗೆ ಅಕ್ರಮ ಸಂಬಂಧ ಹೊಂದಿರುವ ವಿಚಾರ ರವಿಗೆ ಗೊತ್ತಾಗಿ ಬೈದು ಬುದ್ಧಿವಾದ ಹೇಳಿದ್ದ. ಇದರಿಂದ ಆಕ್ರೋಶಗೊಂಡ ಪತ್ನಿ ಪ್ರಿಯಕರನಿಗೆ ವಿಷಯ ತಿಳಿಸಿದ್ದು, ಆತ ತನ್ನ ಸಹಚರರೊಂದಿಗೆ ಸೇರಿ ರವಿಯನ್ನು ಕೊಲೆ ಮಾಡಿದ್ದಾನೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.