ಬೆಂಗಳೂರು: ವ್ಯಕ್ತಿಯೋರ್ವ ತನ್ನ ಪತ್ನಿ 8 ಜನರನ್ನು ವಿವಾಹವಾಗಿದ್ದಾಳೆ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಹಿಳೆ ಪರ ವಕೀಲರು ಇದು ಸುಳ್ಳು ಆರೋಪ ಎಂದಿದ್ದಾರೆ.
ವಿಚಿತ್ರ ಪ್ರಕರಣವೊಂದು ಹೈಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ಹಂತದಲ್ಲಿದ್ದು, ತೀವ್ರ ಕುತೂಹಲ ಮೂಡಿಸಿದೆ. ಹೊಸಪೇಟೆಯ ರಾಜಾ ಹುಸೇನ್ ಎಂಬಾತ ತನ್ನ ಪತ್ನಿ 8 ಜನರನ್ನು ಮದುವೆಯಾಗಿದ್ದಾಳೆ. ಈ ಬಗ್ಗೆ ಸಿಸಿಬಿ ತನಿಖೆ ನಡೆಸುವಂತೆ ಕೋರಿ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾನೆ.
ರಾಜಾ ಹುಸೇನ್ ತನ್ನ ಪತ್ನಿ 8 ಜನರನ್ನು ವಿವಾಹವಾಗಿದ್ದು, ಮೂವರು ಪತಿಯರು ಹೈಕೋರ್ಟ್ ಗೆ ಪ್ರಮಾಣ ಪತ್ರವನ್ನೂ ಸಲ್ಲಿದ್ದಾರೆ. ತಲಾಖ್ ಪಡೆಯದೇ ವಿವಾಹವಾಗಿದ್ದು, ತನಿಖೆ ನಡೆಸುವಂತೆ ಕೋರಿದ್ದಾಗಿ ಹುಸೇನ್ ಪರ ವಕೀಲರು ವಾದ ಮಂಡಿಸಿದ್ದಾರೆ.
ಆದರೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಮಹಿಳೆ ಪರ ವಕೀಲೆ, ಇದು ಸುಳ್ಳು ಆರೋಪ, ಮಹಿಳೆ ನಾಲ್ಕು ಜನರನ್ನು ಮಾತ್ರ ವಿವಾಹವಾಗಿದ್ದಾಳೆ. ಮೊದಲ ಪತಿ ಸಾವನ್ನಪ್ಪಿದ ಬಳಿಕ ಎರಡನೇ ವಿವಾಹವಾಗಿದ್ದಾಳೆ. ಬಳಿಕ ತಲಾಖ್ ಪಡೆದೇ ಬೇರೆ ಮದುವೆಯಾಗಿದ್ದಾಗಿ ತಿಳಿಸಿದ್ದಾರೆ.
ಅಲ್ಲದೇ ಹುಸೇನ್ ಮಾಡುತ್ತಿರುವ ಸುಳ್ಳು ಆರೋಪದ ಬಗ್ಗೆ ಮಾನನಷ್ಟ ಮೊಕದ್ದಮೆ ದಾಖಲಿಸಲು ಆಕೆ ಮುಂದಾಗಿದ್ದಾಗಿ ಕೋರ್ಟ್ ಗೆ ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಹುಸೇನ್ ಪರ ವಕೀಲರು, 8 ಜನರನ್ನು ಮಹಿಳೆ ವಿವಾಹವಾಗಿದ್ದು, ಐದು ಪತಿಯಂದಿರು ಕಳೆದ ಬಾರಿ ಖುದ್ದಾಗಿ ಕೋರ್ಟ್ ಗೆ ಹಾಜರಾಗಿದ್ದರು. ಆದರೆ ಸಮಯಾವಕಾಶದ ಕೊರತೆಯಿಂದ ಎಲ್ಲರ ವಿಚಾರಣೆ ಸಾಧ್ಯವಾಗಿರಲಿಲ್ಲ. ಇನ್ನು ಮೂವರು ಪ್ರಮಾಣಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಮಹಿಳೆ ವಿರುದ್ಧ ಸಿಸಿಬಿ ತನಿಖೆ ನಡೆಸುವಂತೆ ಆದೇಶ ನೀಡಬೇಕು ಎಂದು ಮನವಿ ಮಾಡಿದ್ದಾರೆ.
ವಾದ-ಪ್ರತಿವಾದ ಆಲಿಸಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಏಕಸದಸ್ಯಪೀಠ ವಿಚಾರಣೆಯನ್ನು ಸೆ.27ಕ್ಕೆ ಮುಂದೂಡಿದೆ.