ಬೆಂಗಳೂರು : ದೇವಾಲಯದ ಹುಂಡಿ ಹಣವನ್ನು ದೇಗುಲಗಳಿಗೆ ಬಿಟ್ಟು ಬೇರೆ ಎಲ್ಲೂ ಬಳಕೆ ಮಾಡಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.
ಹಿಂದೂ ದೇವಾಲಯಗಳಲ್ಲಿ ಹುಂಡಿ ಹಾಗೂ ಇತರೆ ಮೂಲಗಳಿಂದ ಬರುವ ಆದಾಯವನ್ನು ದೇವಾಲಯದ ದೈನಂದಿನ ಪೂಜಾ ಕಾರ್ಯಗಳು, ದೇವಾಲಯದ ವಿಶೇಷ ಪೂಜೆ, ಹಬ್ಬಗಳ ವೆಚ್ಚ, ಜಾತ್ರೆ, ಮುಂತಾದ ವೆಚ್ಚಗಳು, ದೇವಾಲಯದ ನೌಕರರ ವೇತನ ಹಾಗೂ ದೇವಾಲಯಕ್ಕೆ ಮೂಲಭೂತ ಸೌಲಭ್ಯ ಕಲ್ಪಿಸಲು ಬಳಸಲಾಗುತ್ತದೆ. ದೇವಾಲಯದ ಹುಂಡಿ ಹಣವನ್ನು ದೇಗುಲಗಳಿಗೆ ಬಿಟ್ಟು ಬೇರೆ ಎಲ್ಲೂ ಬಳಕೆ ಮಾಡಲ್ಲ ಎಂದು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ.
ಹಿಂದೂ ದೇವಾಲಯಗಳಲ್ಲಿ ಹುಂಡಿ ಹಾಗೂ ಇತರೆ ಮೂಲಗಳಿಂದ ಬರುವ ಆದಾಯವನ್ನು ಸರ್ಕಾರವು ಬೇರೆ ಉದ್ದೇಶಗಳಿಗೆ, ಬೇರೆ ಧರ್ಮಗಳಿಗೆ ಬಳಸಲಾಗುತ್ತದೆ ಎಂಬುದು ತಪ್ಪು ಕಲ್ಪನೆಯಾಗಿದೆ. ಈ ಆದಾಯವನ್ನು ಅದೇ ದೇವಾಲಯದ ದಾರ್ಮಿಕ ಉದ್ದೇಶಗಳಿಗೆ, ದೇವಾಲಯದ ಅಭಿವೃದ್ಧಿಗೆ ಹಾಗೂ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಮಾತ್ರ ಬಳಸಲಾಗುತ್ತದೆ.ಇತರೆ ಯಾವುದೇ ಉದ್ದೇಶಗಳಿಗೆ ಹಾಗೂ ಇತರೆ ಧರ್ಮಗಳಿಗೆ ಈವರೆಗೂ ಉಪಯೋಗಿಸಲಾಗಿಲ್ಲ ಮುಂದೆಯೂ ಉಪಯೋಗಿಸ- ಲಾಗುವುದಿಲ್ಲ, ಇದಕ್ಕೆ ಕಾನೂನಿನಲ್ಲಿ ಅವಕಾಶವೂ ಇರುವುದಿಲ್ಲ.
ದೇವಾಲಯಗಳಲ್ಲಿ ಹುಂಡಿಯಿಂದ ಮತ್ತು ಇತರೆ ಮೂಲಗಳಿಂದ ಸಂದಾಯವಾಗುವ ಹಣವು ಆಯಾ ದೇವಾಲಯಗಳ ಖಾತೆಗೆ ಜಮಾ ಆಗಲಿದೆ; ಸರ್ಕಾರಕ್ಕೆ ಜಮಾ ಆಗುವುದಿಲ್ಲ. ಆಯಾ ದೇವಾಲಯಗಳನ್ನು ವಾರ್ಷಿಕ ಆಯವ್ಯಯ ಅನುಮೋದನೆ ಪಡೆದು ಅದರಂತೆ ವೆಚ್ಚ ಮಾಡಲಾಗುತ್ತದೆ. ಉಳಿತಾಯವಾಗುವ ಹಣವನ್ನು ಆಯಾ ದೇವಾಲಯದ ಹೆಸರಿನಲ್ಲಿ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಇರಿಸಲಾಗುತ್ತದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸುವ ಮೂಲಕ ಸ್ಪಷ್ಟನೆ ನೀಡಿದೆ.