ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರು ಮರೆತು ಬಿಟ್ಟು ಹೋಗಿದ್ದ ಟ್ರಾಲಿ ಬ್ಯಾಗ್ ಒಂದನ್ನು ಅವರಿಗೆ ಮರಳಿಸಿದ ಆಗ್ರಾದ ಚಾಲಕರೊಬ್ಬರು ತಮ್ಮ ಪ್ರಾಮಾಣಿಕತೆಯಿಂದ ನೆಟ್ಟಿಗರ ದೃಷ್ಟಿಯಲ್ಲಿ ಹೀರೋ ಆಗಿದ್ದಾರೆ.
ಚಿನ್ನದ ಆಭರಣ ಹಾಗೂ ನಗದು ಇದ್ದ ಟ್ರಾಲಿ ಬ್ಯಾಗ್, ಆಗ್ರಾ ದಂಡು ರೈಲ್ವೇ ನಿಲ್ದಾಣದಲ್ಲಿ ಅನಾಥವಾಗಿ ಬಿದ್ದಿರುವುದನ್ನು ಈ ಚಾಲಕ ನೋಡಿದ್ದಾರೆ. 75,000 ರೂ. ನಗದು ಹಾಗೂ ಚಿನ್ನಾಭರಣಗಳಿದ್ದ ಟ್ರಾಲಿ ಬ್ಯಾಗನ್ನು ಕೂಡಲೇ ರೈಲ್ವೇ ಪೊಲೀಸರಿಗೆ (ಜಿಆರ್‌ಪಿ) ಒಪ್ಪಿಸಿದ್ದಾರೆ ಆಟೋರಿಕ್ಷಾ ಚಾಲಕ ವಿನೋದ್ ಯಾದವ್.
ಬ್ಯಾಗ್‌ನ ಮಾಲೀಕರನ್ನು ಪತ್ತೆ ಮಾಡಲು ಹೊರಟ ಪೊಲೀಸರಿಗೆ ಅದು ಹತ್ರಾಸ್ ಜಿಲ್ಲೆಯ ಮುರ್ಸಾನ್ ಎಂಬ ಊರಿನ ಬಿರಿ ಸಿಂಗ್ ಎಂಬ ವ್ಯಕ್ತಿಯದ್ದು ಎಂದು ತಿಳಿದುಬಂದಿದೆ. ಭೋಪಾಲ್‌ನಿಂದ ರೈಲೊಂದರಲ್ಲಿ ಆಗ್ರಾ ಕಂಟೋನ್ಮೆಂಟ್ ನಿಲ್ದಾಣಕ್ಕೆ ಆಗಮಿಸಿದ್ದ ಬಿರಿ ಸಿಂಗ್‌ರನ್ನು ನಿಲ್ದಾಣದಲ್ಲಿ ಸಿಕ್ಕ ಟ್ರಾಲಿ ಬ್ಯಾಗ್ ಒಳಗೆ ಇದ್ದ ಸಂಪರ್ಕ ಸಂಖ್ಯೆಯೊಂದರ ಮೂಲಕ ಪತ್ತೆ ಮಾಡಲಾಗಿದೆ.
“ಬಿರಿ ಸಿಂಗ್‌ರ ಸಂಬಂಧಿಕರಿಗೆ ಕರೆ ಮಾಡಿದ ನಾವು, ಅವರಿಗೆ ವಿಷಯ ಮುಟ್ಟಿಸಿದೆವು. ಬ್ಯಾಗ್ ಅನ್ನು ಜಿಆರ್‌ಪಿ ಠಾಣೆಯಲ್ಲಿ ಬಂದು ಪಡೆದುಕೊಳ್ಳಲು ನಾವು ಕೋರಿಕೊಂಡೆವು. ಸೂಕ್ತ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ನಾವು ಆತನಿಗೆ ಬ್ಯಾಗ್ ಅನ್ನು ಹಿಂದಿರುಗಿಸಿದ್ದೇವೆ. ಇದರಿಂದ ಸಂತಸಗೊಂಡ ಬಿರಿ ಸಿಂಗ್ ನಮಗೆ ಹಾಗೂ ಆಟೋರಿಕ್ಷಾ ಚಾಲಕನಿಗೆ ಧನ್ಯವಾದ ತಿಳಿಸಿದ್ದಾರೆ,” ಎಂದು ಸಬ್ ಇನ್ಸ್‌ಪೆಕ್ಟರ್ ಸುಶೀಲ್ ಕುಮಾರ್ ತಿಳಿಸಿದ್ದಾರೆ.