ನಿಮ್ಮ ಪ್ರೀತಿಪಾತ್ರರನ್ನು ತಬ್ಬಿಕೊಳ್ಳಲು ಇನ್ನು ಮುಂದೆ ಹಿಂಜರಿಯಬೇಕಾಗಿಲ್ಲ. ಏಕೆಂದರೆ ಹಾಗೆ ಮಾಡುವುದರಿಂದ ಒಳ್ಳೆಯದೇ ಆಗಲಿದೆ ಎಂಬುದು ಈಗ ಸಾಬೀತಾಗಿದೆ. ಹಾಗಂತ ವಿಜ್ಞಾನವೇ ಹೇಳುತ್ತಿದೆ.
ಅಂದರೆ ತಬ್ಬಿಕೊಳ್ಳುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುವುದಷ್ಟೇ ಅಲ್ಲದೆ ಮನಸ್ಸಿನ ಒತ್ತಡವೂ ತಗ್ಗುತ್ತದೆ. ಕಾರ್ನೆಜಿ ಮೆಲನ್ ಯುನಿವರ್ಸಿಟಿಯ ಮನಃಶಾಸ್ತ್ರ ವಿಭಾಗವು ಅಪ್ಪುಗೆ ಹಾಗೂ ಭಾವನಾತ್ಮಕ ಸ್ಥಿತಿಗತಿಗಳಿಗೆ ಇರುವ ಸಂಬಂಧ, ಅದು ದೇಹ-ಮನಸ್ಸಿನ ಮೇಲೆ ಬೀರುವ ಪರಿಣಾಮಗಳನ್ನು ಸಂಶೋಧನೆ ಮೂಲಕ ಕಂಡುಕೊಂಡಿದೆ.
ಹಲವಾರು ವ್ಯಕ್ತಿಗಳನ್ನು ಈ ಕುರಿತ ಅಧ್ಯಯನಕ್ಕೆ ಒಳಪಡಿಸಲಾಗಿದ್ದು, ಪರಸ್ಪರ ಸಹಮತದ ಅಪ್ಪುಗೆಯಿಂದ ವ್ಯಕ್ತಿ ಸೋಂಕಿಗೆ ಒಳಗಾಗುವ ಸಾಧ್ಯತೆ ತಗ್ಗುತ್ತದೆ ಹಾಗೂ ಒತ್ತಡದಲ್ಲಿದ್ದರೂ ಅನಾರೋಗ್ಯಕ್ಕೀಡಾಗುವ ಸಾಧ್ಯತೆಯೂ ಕಡಿಮೆ ಎಂದು ಕಾರ್ನೆಜಿ ಮೆಲನ್ ಯುನಿವರ್ಸಿಟಿಯ ಸಂಶೋಧನಾ ತಂಡದ ನೇತೃತ್ವ ವಹಿಸಿರುವ ಸೈಕಾಲಜಿ ಪ್ರೊಫೆಸರ್ ಶೆಲ್ಡನ್ ಕೊಹೆನ್ ಹೇಳಿದ್ದಾರೆ.