
ಶ್ರೀನಗರ: ದೇಶದ ಹಲವೆಡೆ ಭಾರಿ ಮಳೆಯಾಗುತ್ತಿದೆ. ಜಮ್ಮು-ಕಾಶ್ಮೀರದಲ್ಲೂ ಭಾರಿ ಮಳೆಯಾಗುತ್ತಿದೆ. ಜಮ್ಮು-ಶ್ರೀನಗರ ಹೆದ್ದಾರಿಯ ಉದ್ದಕ್ಕೂ ಬೃಹತ್ ರಸ್ತೆಯೊಂದು ಕುಸಿದಿದೆ.
ರಾಂಬನ್ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ಭಾರಿ ಮಳೆಯಿಂದ ಭೂಕುಸಿತ ಉಂಟಾಗಿದೆ. ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಸುರಂಗಗಳನ್ನು ಸಂಪರ್ಕಿಸುವ ರಸ್ತೆ ಕೊಚ್ಚಿಹೋಗಿದೆ. ಸದ್ಯ, ಬೃಹತ್ ಗುಹೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ಎಡೆಬಿಡದೆ ಸುರಿಯುತ್ತಿರುವ ಮಳೆಯ ನಡುವೆಯೂ ರಸ್ತೆಯನ್ನು ತೆರವುಗೊಳಿಸುವ ಮತ್ತು ಹಾನಿಗೊಳಗಾದ ಭಾಗಗಳನ್ನು ಸರಿಪಡಿಸುವ ಕೆಲಸ ನಡೆಯುತ್ತಿದೆ. ಮರುಸ್ಥಾಪನೆ ಕಾರ್ಯ ಪೂರ್ಣಗೊಳ್ಳುವವರೆಗೆ ಹೆದ್ದಾರಿಯಲ್ಲಿ ಪ್ರಯಾಣಿಸದಂತೆ ಜನರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಮ್ಮು-ಶ್ರೀನಗರ ಹೆದ್ದಾರಿಯು ಕಣಿವೆಯನ್ನು ದೇಶದ ಇತರ ಭಾಗಗಳೊಂದಿಗೆ ಸಂಪರ್ಕಿಸುತ್ತದೆ. ಭಾನುವಾರದವರೆಗೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಗುಡುಗು ಸಹಿತ ಸಾಧಾರಣದಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.