ಚಿತ್ರದುರ್ಗ ಜಿಲ್ಲೆ, ಮೊಳಕಾಲ್ಮೂರು ತಾಲೂಕಿನ ರೈತರೊಬ್ಬರ ಹೊಲದಲ್ಲಿ ಬರೋಬ್ಬರಿ 5 ಕೆಜಿ ತೂಕದ ನೈಸರ್ಗಿಕ ಅಣಬೆ ಪತ್ತೆಯಾಗಿದೆ. ಇದರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ರಾಯಪುರದ ಪ್ರಕಾಶ್ ಎಂಬವರ ಹೊಲದಲ್ಲಿ ನೈಸರ್ಗಿಕ ಅಣಬೆಗಾಗಿ ಹುಡುಕಾಟ ನಡೆಸುವ ವೇಳೆ ಒಂದು ಅಡಿ ಎತ್ತರ, ಒಂದು ಅಡಿಗೂ ಹೆಚ್ಚು ಅಗಲ ಇರುವ ಹಾಗೂ ಮೂರು ಕವಲುಗಳಾಗಿ ಅರಳಿರುವ ಈ ಅಣಬೆ ಕಂಡು ಬಂದಿದೆ.
ಪರೀಕ್ಷೆ ವೇಳೆ ಇದು ತಿನ್ನಲು ಯೋಗ್ಯ ಎಂಬ ಸಂಗತಿ ದೃಢಪಟ್ಟಿದ್ದು, ಬೃಹತ್ ಗಾತ್ರದ ಅಣಬೆ ಪತ್ತೆಯಾದ ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಇದನ್ನು ನೋಡುವ ಸಲುವಾಗಿ ಆಗಮಿಸಿದ್ದರು.