ಮದ್ಯ ವಿವಿಧ ಸರ್ಕಾರಗಳಿಗೆ ಆದಾಯದ ಪ್ರಮುಖ ಮೂಲಗಳಲ್ಲಿ ಒಂದಾಗಿದೆ. ಇದನ್ನು ಸಾಂಪ್ರದಾಯಿಕವಾಗಿ ಆದಾಯದ ದೊಡ್ಡ ಮೂಲಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಇತ್ತೀಚಿನ ಮದ್ಯ ಮಾರಾಟದ ಅಂಕಿ-ಅಂಶದಿಂದ ಇದು ಮತ್ತೊಮ್ಮೆ ಸಾಬೀತಾಗಿದೆ. ವಿಪರ್ಯಾಸ ಅಂದ್ರೆ ರಾಜ್ಯವೊಂದರಲ್ಲಿ ಇಸ್ರೋದ ಚಂದ್ರಯಾನ-3 ಮಿಷನ್ಗೆ ಆದ ವೆಚ್ಚಕ್ಕಿಂತಲೂ ಅಧಿಕ ಮೊತ್ತದ ಮದ್ಯವನ್ನು ಕೇವಲ 9 ದಿನಗಳಲ್ಲಿ ಜನರು ಸೇವಿಸಿದ್ದಾರೆ.
ಓಣಂ ಕೇರಳದ ಪ್ರಮುಖ ಹಬ್ಬ. ಓಣಂ ಅನ್ನು ಕೇರಳದಲ್ಲಿ ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಜನತೆ ಹಬ್ಬದ ಮೂಡ್‌ನಲ್ಲಿ ಭರ್ತಿ ಮದ್ಯ ಸೇವಿಸುತ್ತಾರೆ. ಈ ವರ್ಷ ಓಣಂ ಸಮಯದಲ್ಲಿ ಕೇರಳದ ಜನರು ಮೊದಲ 9 ದಿನಗಳಲ್ಲಿ 759 ಕೋಟಿ ರೂಪಾಯಿ ಮೌಲ್ಯದ ಮದ್ಯ ಸೇವಿಸಿದ್ದಾರಂತೆ. ಓಣಂ ಹಬ್ಬದ ಕಾರಣ ಬುಧವಾರ ಮತ್ತು ಗುರುವಾರ ಎರಡು ದಿನ ಕೇರಳದಲ್ಲಿ ಮದ್ಯದ ಅಂಗಡಿಗಳನ್ನು ಮುಚ್ಚಲಾಗಿತ್ತು. ಅಂದರೆ ಕೇವಲ 7-8 ದಿನಗಳಲ್ಲಿ ಈ ಮಟ್ಟಿಗೆ ಮದ್ಯ ಮಾರಾಟವಾಗಿದೆ.
ಚಂದ್ರಯಾನ-3 ವೆಚ್ಚಕ್ಕಿಂತ ಹೆಚ್ಚು !
ಈ ಅಂಕಿ ಅಂಶವು ಇಸ್ರೋದ ಇತ್ತೀಚಿನ ಚಂದ್ರನ ಮಿಷನ್‌ನ ವೆಚ್ಚಕ್ಕಿಂತ ಹೆಚ್ಚಾಗಿದೆ. ಇಸ್ರೋ ಸುಮಾರು 600 ಕೋಟಿ ರೂಪಾಯಿ ವೆಚ್ಚದಲ್ಲಿ ಚಂದ್ರಯಾನ-3 ಮಿಷನ್ ಪೂರ್ಣಗೊಳಿಸಿದೆ. ಅಂದರೆ ಕೇರಳದ ಜನರು ಓಣಂ ಆಚರಿಸುವಾಗ, ಇಸ್ರೋದ ಚಂದ್ರಯಾನ ಮಿಷನ್‌ನ ಒಟ್ಟು ವೆಚ್ಚಕ್ಕಿಂತ ಸುಮಾರು 160 ಕೋಟಿ ರೂಪಾಯಿ ಮೌಲ್ಯದ ಹೆಚ್ಚುವರಿ ಮದ್ಯ ಸೇವಿಸಿದ್ದಾರೆ. ಓಣಂನ ಪ್ರಮುಖ ದಿನ 116 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಈ ಮೊತ್ತ 112 ಕೋಟಿ ರೂಪಾಯಿ ಇತ್ತು. ಕಳೆದ ವರ್ಷ ಓಣಂ ಸಮಯದಲ್ಲಿ ಕೇರಳದ ಜನರು ಒಟ್ಟಾರೆ 624 ಕೋಟಿ ರೂಪಾಯಿ ಮೌಲ್ಯದ ಮದ್ಯ ಸೇವಿಸಿದ್ದರು.