ಬೆಂಗಳೂರು ಮೆಟ್ರೋದ ದರ ಏರಿಕೆಯಿಂದ ಪ್ರಯಾಣಿಕರು ಕೆಂಡಾಮಂಡಲರಾಗಿದ್ದಾರೆ. ಕೆಲವು ದರಗಳು ಬಹುತೇಕ ದುಪ್ಪಟ್ಟಾಗಿದೆ. ಆಟೋರಿಕ್ಷಾಗಳು ಈಗ ಅಗ್ಗದ ಆಯ್ಕೆ ಎಂದು ಪ್ರಯಾಣಿಕರು ವಾದಿಸುತ್ತಿದ್ದಾರೆ. ಫೆಬ್ರವರಿ 9, 2025 ರಂದು ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ ಪರಿಚಯಿಸಿದ ಹಠಾತ್ ಮತ್ತು ಭಾರಿ ದರ ಏರಿಕೆಯಿಂದ ಬೆಂಗಳೂರಿನ ಮೆಟ್ರೋ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ.
ಪರಿಷ್ಕೃತ ದರ ರಚನೆಯು ವ್ಯಾಪಕ ಅಸಮಾಧಾನಕ್ಕೆ ಕಾರಣವಾಗಿದ್ದು, ಪ್ರಯಾಣಿಕರು ಈ ಏರಿಕೆಯನ್ನು ಅನ್ಯಾಯ ಎಂದು ದೂರಿ, ಪ್ರಯಾಣ ದರ ಏರಿಕೆ ಹೆಸರಲ್ಲಿ ಬೆಂಗಳೂರು ಮೆಟ್ರೋ ಅಕ್ಷರಶಃ ಹಗಲು ದರೋಡೆಗೆ ಇಳಿದಿರುವ ಹಾಗೆ ಕಾಣುತ್ತಿದೆ. ಶೇ.47ರಷ್ಟು ದರ ಹೆಚ್ಚಳ ಎಂದು ಬಿಎಂಆರ್ಸಿಎಲ್ (ಬೆಂಗಳೂರು ಮೆಟ್ರೋ ರೈಲು ನಿಗಮ) ಹೇಳಿದ್ದರೂ ಹಲವು ಕಡೆಗಳಲ್ಲಿ ಹಿಂದಿನ ದರದ ದುಪ್ಪಟ್ಟು ಶೇ.100 ರಷ್ಟು ಅಧಿಕ ಮೊತ್ತ ನೀಡಬೇಕಾಗಿದೆ. ʼನಮ್ಮ ಮೆಟ್ರೊ’ ಪ್ರಯಾಣ ದರ ಏರಿಕೆ ಹೆಚ್ಚಳದಿಂದ ದೇಶದಲ್ಲಿಯೇ ಅತಿ ದುಬಾರಿ ಪ್ರಯಾಣ ದರವನ್ನು ಹೊಂದಿರುವ ರಾಜ್ಯ ಬೆಂಗಳೂರಿನ ಮೆಟ್ರೋದ್ದಾಗಿದೆ. ಪ್ರಯಾಣಿಕರಿಂದ ಪ್ರಯಾಣ ದರವನ್ನು ಪಡೆಯುವ ಬದಲು ಬೃಹತ್ ಆದಾಯ ಸಂಗ್ರಹದ ಉದ್ದೇಶದಿಂದ ದರ ಹೆಚ್ಚಳ ಮಾಡಲಾಗಿದೆ ಎಂಬ ಆರೋಪಕ್ಕೆ ನಿಗಮ ಗುರಿಯಾಗಿದೆ.
ಸೋಮವಾರ ಬೆಳಿಗ್ಗೆ ಯಥಾ ಪ್ರಕಾರ ಮೆಟ್ರೋ ಸ್ಟೇಶನ್ಗಳಿಗೆ ಬಂದು ಟಿಕೆಟ್ ಪಡೆದ ಪ್ರಯಾಣಿಕರು ಟಿಕೆಟ್ ದರ ಹೆಚ್ಚಳ ಕಂಡು ಒಂದು ಕ್ಷಣ ಹೌಹಾರಿದ್ದಾರೆ. ಸರ್ಕಾರಗಳನ್ನು ಬೈದು ಮುಂದೆ ಸಾಗಿದ್ದಾರೆ. ಕೆಲವು ಪ್ರಜ್ಞಾವಂತರು ಬೆಂಗಳೂರು ಮೆಟ್ರೋ ಪ್ರಯಾಣ ದರ ಏರಿಕೆ ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಿಡಿ ಶಾಪ ಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸರ್ಕಾರಗಳು ನಿರಂತರವಾಗಿ ಒಂದರ ಮೇಲೊಂದುನಂತೆ ಸಾರಿಗೆ ದರವನ್ನು ಹೆಚ್ಚಿಸುತ್ತಿರುವುದು ಜನರ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿದೆ.