ಕೊಪ್ಪಳ: ಅರ್ಜಿ ಹಾಕದಿದ್ದರೂ ಕೊಪ್ಪಳದ ಹುಚ್ಚಮ್ಮ ಚೌದ್ರಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗಿದೆ.
ದಾನ ಚಿಂತಾಮಣಿ ಎಂದೇ ಹೆಸರು ಪಡೆದಿರುವ ಹುಚ್ಚಮ್ಮ ಕೊಪ್ಪಳ ಜಿಲ್ಲೆಯ ಕುಣಿಕೇರಿ ಗ್ರಾಮದ ನಿವಾಸಿಯಾಗಿದ್ದಾರೆ. 2012ರಲ್ಲಿ ಊರಿಗೆ ಶಾಲೆ ಮಂಜೂರಾದ ಸಂದರ್ಭದಲ್ಲಿ ತಮ್ಮ ಹೆಸರಲ್ಲಿದ್ದ ಎರಡು ಎಕರೆ ಭೂಮಿಯನ್ನು ದಾನ ಮಾಡಿದ್ದರು. ಆ ಭೂಮಿಗೆ ಮೌಲ್ಯ ಈಗ ಒಂದು ಕೋಟಿಗೂ ಅಧಿಕವಾಗಿದೆ.
ಜೀವನ ನಿರ್ವಹಣೆಗೆ ಇದ್ದ ಭೂಮಿಯನ್ನು ಶಾಲೆಗೆ ದಾನ ಮಾಡಿದ ಹುಚ್ಚಮ್ಮ ಅದೇ ಶಾಲೆಯಲ್ಲಿ ಬಿಸಿಯೂಟ ತಯಾರಿಸಿ ಮಕ್ಕಳ ಸೇವೆ ಮಾಡುತ್ತಿದ್ದರು. ಎರಡು ವರ್ಷದ ಹಿಂದೆ ಅವರಿಗೆ 60 ವರ್ಷವಾದ ಕಾರಣ ಬಿಸಿಯೂಟ ತಯಾರಕರ ಕೆಲಸದಿಂದ ತೆಗೆಯಲಾಗಿದ್ದು, ಈಗ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಅವರಿಗೆ ಅರ್ಜಿ ಹಾಕದಿದ್ದರೂ ರಾಜೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.