ಹುಬ್ಬಳ್ಳಿ: ಚೋಟಾ ಮುಂಬೈ ಎಂದೆ ಕರೆಯಲ್ಪಡುತ್ತಿರುವ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪೊಲೀಸರ ಬಂದೂಕು ಮತ್ತೆ ಸದ್ದುಮಾಡಿದೆ. ಅಂತರಾಜ್ಯ ದರೋಡೆಕೋರರ ಗುಂಪಿನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿ ಇಬ್ಬರು ನಟೋರಿಯರ್ ಕಳ್ಳರನ್ನು ಬಂಧಿಸಿದ್ದಾರೆ.
ಗುಜರಾತ್ ಮೂಲದ ದಿಲೀಪ್ ಹಾಗೂ ನೀಲೇಶ್ ಬಂಧಿತ ಆರೋಪಿಗಳು. ದರೋಡೆಕೋರರ ಗುಂಪು ತಡರಾತ್ರಿ ಬೈಕ್ ನಲ್ಲಿ ತೆರಳುತ್ತಿದ್ದ ಕುಂದಗೋಳ ಮೂಲದ ವ್ಯಕ್ತಿಯನ್ನು ಅಡ್ಡಗಟ್ಟಿ ಬೈಕ್, ನಗದು ಹಣ, ಮೊಬೈಲ್ ಫೋನ್ ಕಿತ್ತುಕೊಂಡು ಎಸ್ಕೇಪ್ ಆಗಿತ್ತು. ಇದಾದ ಕೆಲವೇಸಮಯದಲ್ಲಿ ರವಿಚಂದ್ರ ಎಂಬಾತನನ್ನು ಅಡ್ಡಗಟ್ಟಿ ಸುಲಿಗೆ ಮಾಡಿತ್ತು.
ಬಳಿಕ ಮಂಟೂರ ರಸ್ತೆಯಲ್ಲಿರುವ ಶಾರೂಖ್ ಎಂಬುವವರ ಮನೆಗೆ ನುಗ್ಗಿ ಕನ್ನ ಹಾಕಲು ಯತ್ನಿಸಿತ್ತು. ಮನೆ ಮೇಲೆ ಕಲ್ಲು ತೂರಾಟ ನಡೆಸಿ ಎಸ್ಕೇಪ್ ಆಗಿತ್ತು.
ಹೀಗೆ ಎಸ್ಕೇಪ್ ಆಗುತ್ತಿದ್ದ ಗುಂಪು ಬೈಕ್ ನಲ್ಲಿ ಅನುಮಾನಾಸ್ಪದವಾಗಿ ಅಲೆದಾಡುತ್ತಿದ್ದ ವೇಳೆ ಹುಬ್ಬಳ್ಳಿ ಹೊರವಲಯದ ಬಿಡನಾಳ ಬಳಿ ಬೆಂಡಿಗೇರಿ ಪೊಲೀಸರು ಹಿಡಿದು ತಪಾಸಣೆ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ. ಆತ್ಮರಕ್ಷಣೆಗಾಗಿ ಪೊಲೀಸರು ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಈ ವೇಳೆ ಇಬ್ಬರ ಕಾಲಿಗೆ ಗುಂಡೇಟು ಹೊಡೆದು ಬಂಧಿಸಿದ್ದಾರೆ.
ಘಟನೆ ವೇಳೆ ಇಬ್ಬರು ಪೊಲೀಸರಿಗೂ ಗಾಯಗಳಾಗಿವೆ. ಇಬ್ಬರು ಆರೋಪಿಗಳನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.