ಹುಬ್ಬಳ್ಳಿ: ಹುಬ್ಬಳ್ಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಯರ ಫೋಟೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿನಿಯರ ಫೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಇನ್ ಸ್ಟಾಗ್ರಾಂ ನಲ್ಲಿ ಪೋಸ್ಟ್ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಕಾಲೇಜಿನ ಓರ್ವ ವಿದ್ಯಾರ್ಥಿಯನ್ನು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದರು. ಇದೀಗ ದ್ವಿತೀಯ ಬಿಕಾಂ ಓದುತ್ತಿದ್ದ ಮತ್ತಿಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಮೊದಲು ಬಂಧಿಸಲ್ಪಟ್ಟ ಆರೋಪಿ ವಿದ್ಯಾರ್ಥಿ ಮಂಪರು ಪರೀಕ್ಷೆ ವೇಳೆ ಇನ್ನಿಬ್ಬರು ವಿದ್ಯಾರ್ಥಿಗಳ ಹೆಸರನ್ನು ಬಾಯ್ಬಿಟ್ಟಿದ್ದ. ಈ ಹಿನ್ನೆಲೆಯಲ್ಲಿ ಇಬ್ಬರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಮೂವರಲ್ಲಿ ಓರ್ವ ವಿದ್ಯಾರ್ಥಿ ಹ್ಯಾಕರ್ ಆಗಿದ್ದಾನೆ. ಆತನ ಕೈಚಳಕದಿಂದಾಗಿಯೇ ಹುಡುಗಿಯರ ಅಕೌಂಟ್ ಹ್ಯಾಕ್ ಮಾಡಿ ಫೋಟೋಗಳನ್ನು ಅಸಭ್ಯವಾಗಿ ಎಡಿಟ್ ಮಾಡಿ ಇನ್ ಸ್ಟಾಗ್ರಾಂ ನಲ್ಲಿ ಹರಿಬಿಡುತ್ತಿದ್ದ.
ಹ್ಯಾಕರ್ ವಿದ್ಯಾರ್ಥಿಗೆ ಇನ್ನಿಬ್ಬರು ವಿದ್ಯಾರ್ಥಿಗಳು ಸಾಥ್ ನೀಡಿದ್ದರು. ಪ್ರಕರಣದ ದಿಕ್ಕು ತಪ್ಪಿಸಲು ಬಂಧಿತ ವಿದ್ಯಾರ್ಥಿಗಳು ಫೇಕ್ ಅಕೌಂಟ್ ಕ್ರಿಯೇಟ್ ಮಾಡಿದ್ದರು. ಎಡಿಟ್ ಮಾಡಿದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದರು. ಇದೀಗ ಮೂವರು ವಿದ್ಯಾರ್ಥಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.