ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಯುವತಿ ಅಂಜಲಿ ಹತ್ಯೆ ಪ್ರಕರಣ ಖಂಡಿಸಿ ಬಿಜೆಪಿ ಮುಖಂಡರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ.
ಅಂಜಲಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡರು, ವೀರಾಪುರ ಓಣಿಯ ಅಂಜಲಿ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು. ಬಳಿಕ ಅಂಜಲಿ ಹತ್ಯೆ ಪ್ರಜರಣ ಖಂಡಿಸಿ ಹುಬ್ಬಳ್ಳಿಯ ಟೌನ್ ಪೊಲೀಸ್ ಠಾಣೆ ಎದುರು ಬಿಜೆಪಿ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಧಿಕ್ಕಾರ ಕೂಗಿದ ಬಿಜೆಪಿ ನಾಯಕರು, ಆರೋಪಿ ವಿಶ್ವನನ್ನು ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿ ನೇಹಾ ಹತ್ಯೆ ಮಾಸುವ ಮುನ್ನವೇ ಮತ್ತೋರ್ವ ಯುವತಿಯ ಬರ್ಬರ ಕೊಲೆಯಾಗಿದೆ. ವೀರಾಪುರ ಓಣಿಯಲ್ಲಿ 21 ವರ್ಷದ ಯುವತಿ ಅಂಜಲಿ ಎಂಬುವವಳನ್ನು ವಿಶ್ವ ಅಲಿಯಾಸ್ ಗಿರೀಶ್ ಎಂಬಾತ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದಾನೆ. ಮೇ 16ರಂದು ಮುಂಜಾನೆ ಮನೆ ಬಾಗಿಲು ತೆರೆಯುತ್ತಿದ್ದ ಅಂಜಲಿಯನ್ನು ದುಷ್ಕರ್ಮಿ ಬರ್ಬರವಾಗಿ ಹತ್ಯೆಗೈದು ಎಸ್ಕೇಪ್ ಆಗಿದ್ದು, ಆರೋಪಿ ಬಂಧನಕ್ಕಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಯುವತಿ ಅಂಜಲಿಗೆ ವಿಶ್ವ ಅಲಿಯಾಸ್ ಗಿರೀಶ್ ನಿಂದ ಬೆದರಿಕೆ ಇರುವುದಾಗಿ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದಾಗ್ಯೂ ಪೊಲೀಸರು ಗಂಭೀರವಾಗಿ ಪರಿಗಣಿಸಿಲ್ಲ. ಪೊಲೀಸರ ನಿರ್ಲಕ್ಷಕ್ಕೆ ಯುವತಿ ಬಲಿಯಾಗಿದ್ದಾಳೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣ ಸಂಬಂಧ ಇಬ್ಬರು ಪೊಲೀಸ್ ಸಿಬ್ಬಂದಿಗಳು ಅಮಾನತುಮಾಡಲಾಗಿದೆ.