
ಪಾಕಿಸ್ತಾನದ ಆಡಳಿತಾರೂಢ ಪಿಟಿಐ ಪಕ್ಷದ ಸಂಸದ ಹಾಗೂ ಟಿವಿ ಹೋಸ್ಟ್ ಡಾ. ಆಮೀರ್ ಲಿಯಾಕತ್ ಹುಸೇನ್ ಮೂರನೇ ಮದುವೆಯಾಗಿದ್ದಾರೆ. 49-ವರ್ಷ ವಯಸ್ಸಿನ ಸಂಸದ 18 ವರ್ಷ ವಯಸ್ಸಿನ ಸಾದಿಯಾ ದಾನಿಯಾ ಶಾ ಜೊತೆಗೆ ಮದುವೆಯಾಗಿದ್ದಾರೆ.
ಈ ವಿಚಾರವೀಗ ಪಾಕಿಸ್ತಾನದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ಜೋಡಿ ಬುಧವಾರ ಮದುವೆಯಾಗಿದೆ. ಇದೇ ದಿನ ಆಮೀರ್‌ಗೆ ಆತನ ಎರಡನೇ ಮಡದಿ ವಿಚ್ಛೇದನ ನೀಡಿದ್ದಾರೆ.
“ಕಳೆದ ರಾತ್ರಿ ಸಯಿದಾ ದಾನಿಯಾ ಶಾ, ಜೊತೆಗೆ ಮದುವೆ ಮಾಡಿಕೊಂಡೆ. ಆಕೆ ದಕ್ಷಿಣ ಪಂಜಾಬ್‌ನ ಲೋಧ್ರಾನ್‌ನ ಘನವೆತ್ತ ನಜೀಬ್ ಉದ್ ತರ್ಫೇನ್ ’ಸಾದತ್’ ಕುಟುಂಬಕ್ಕೆ ಸೇರಿದವಳು. ಆಕೆ ಚಾರ್ಮಿಂಗ್, ಸಿಂಪಲ್ ಆಗಿರುವ ಡಾರ್ಲಿಂಗ್ ಆಗಿದ್ದಾಳೆ. ನನ್ನೆಲ್ಲಾ ಹಿತೈಷಿಗಳಿಗೆ, ದಯವಿಟ್ಟು ನಮಗಾಗಿ ಪ್ರಾರ್ಥನೆ ಮಾಡಿ ಎಂದು ಕೇಳಲು ಬಯಸುತ್ತೇನೆ. ನಾನೀಗ ತಾನೇ ಒಂದು ಕರಾಳ ಸುರಂಗ ಹಾದು ಬಂದಿದ್ದೇನೆ, ಅದೊಂದು ತಪ್ಪಾದ ತಿರುವು,” ಎಂದು ಹೇಳಿಕೊಂಡಿದ್ದಾರೆ ಆಮೀರ್.
ಈತನ ಎರಡನೇ ಪತ್ನಿ ತುಬಾ ಆಮೀರ್ ತಮ್ಮ ವಿಚ್ಛೇದನದ ವಿಚಾರವನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ತಾನು ಪತಿಯಿಂದ ಬೇರಾಗಿ ಕಳೆದ 14 ತಿಂಗಳು ಕಳೆದಿದ್ದಾಗಿ ತಿಳಿಸಿದ್ದಾರೆ. ಆಮೀರ್‌ನ ಎರಡನೇ ಮದುವೆ 2018ರಲ್ಲಿ ಆಗಿತ್ತು.