ಬೆಂಗಳೂರು: ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್(HSRP) ಇಲ್ಲದ ವಾಹನಗಳಿಗೆ ಫೆಬ್ರವರಿ 17 ರಿಂದ ದಂಡ ಹಾಕಲು ಸಾರಿಗೆ ಇಲಾಖೆ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದಾರೆ.
2019ರ ಏಪ್ರಿಲ್ 1ಕ್ಕಿಂತ ಮೊದಲು ನೋಂದಣಿಯಾದ ಎಲ್ಲಾ ಮಾದರಿಯ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್(ಹೆಚ್.ಎಸ್.ಆರ್.ಪಿ.) ಅಳವಡಿಸಲು ಗಡುವು ಸಮೀಪಿಸುತ್ತಿದೆ. ಹೀಗಿದ್ದರೂ ವಾಹನ ಮಾಲೀಕರು ಆಸಕ್ತಿ ತೋರಿಸುತ್ತಿಲ್ಲ. ಇಂತಹ ವಾಹನ ಮಾಲೀಕರಿಗೆ ಬಿಸಿ ಮುಟ್ಟಿಸಲು ಸಾರಿಗೆ ಇಲಾಖೆ ಮುಂದಾಗಿದ್ದು, ಫೆಬ್ರವರಿ 17 ರಿಂದ ದಂಡಾಸ್ತ್ರ ಪ್ರಯೋಗಿಸಲು ಸಿದ್ಧತೆ ಮಾಡಿಕೊಂಡಿದೆ.
HSRP ನಂಬರ್ ಪ್ಲೇಟ್ ಹಾಕಿಸಲು ಸಾರಿಗೆ ಇಲಾಖೆ 2023ರ ನವೆಂಬರ್ 17ರ ಗಡುವು ವಿಧಿಸಿದ್ದು, ಬಳಿಕ 2024ರ ಫೆಬ್ರವರಿ 17ರವರೆಗೆ ವಿಸ್ತರಿಸಲಾಗಿದೆ. ಇನ್ನು ಕೆಲವೇ ದಿನಗಳಷ್ಟೇ ಬಾಕಿ ಇದ್ದರೂ ಇದುವರೆಗೂ ಕೇವಲ 10 ಲಕ್ಷ ವಾಹನಗಳಿಗೆ ಮಾತ್ರ ನಂಬರ್ ಪ್ಲೇಟ್ ಹಾಕಿಸಲಾಗಿದೆ. ಇನ್ನೂ ಭಾರಿ ಸಂಖ್ಯೆಯ ವಾಹನಗಳ ಮಾಲೀಕರು HSRP ನಂಬರ್ ಪ್ಲೇಟ್ ಹಾಕಿಸಿಲ್ಲ. ಗಡುವು ಮುಗಿದ ನಂತರ ವಾಹನಗಳ ಪರಿಶೀಲಿಸಿ ದಂಡ ವಿಧಿಸಲಾಗುವುದು.
ದ್ವಿಚಕ್ರ ವಾಹನಗಳಿಗೆ 390 ರೂ. ನಿಂದ 440 ರೂ., 4 ಚಕ್ರದ ವಾಹನಗಳಿಗೆ 680 ರೂ. ನಿಂದ 690 ರೂಪಾಯಿ ದಂಡ ವಿಧಿಸಲಾಗುವುದು. ಸಾರಿಗೆ ಇಲಾಖೆ ಮತ್ತು ಸಂಚಾರ ಪೊಲೀಸರು ದಂಡ ವಿಧಿಸಲಿದ್ದು, ಮೊದಲ ಸಲ ಸಿಕ್ಕಿ ಬಿದ್ದರೆ 1,000 ರೂ., ಎರಡನೇ ಸಲ ಸಿಕ್ಕಿ ಬಿದ್ದರೆ 2,000 ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶ ಇದೆ ಎನ್ನಲಾಗಿದೆ.