ಇಂದು ಜನವರಿ 10 ಗ್ರೀಕ್ ಗಾಡ್ ಅಂತಾನೇ ಕರೆಸಿಕೊಳ್ಳುವ ಬಾಲಿವುಡ್ ನಟ ಹೃತಿಕ್ ರೋಶನ್ ಹುಟ್ಟಿದ ದಿನ. 48ನೇ ವರ್ಷಕ್ಕೆ ಕಾಲಿಟ್ಟಿರುವ ಹೃತಿಕ್ ಅವರು ತಮ್ಮ ಅಭಿಮಾನಿಗಳಿಗೆ ಜನ್ಮದಿನದ ಉಡುಗೊರೆ ನೀಡಿದ್ದಾರೆ. ಕಳೆದ ವರ್ಷ ಸೆಟ್ಟೆರಿರೋ ʼವಿಕ್ರಮ್ ವೇದಾʼ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಮಾಡುವ ಮೂಲಕ ವಿಕ್ರಮ್ ವೇದಾ ಚಿತ್ರತಂಡ ಹೃತಿಕ್ ಫ್ಯಾನ್ಸ್ ಖುಷಿಗೆ ಕಾರಣರಾಗಿದ್ದಾರೆ.
ಹೌದು, ಹೃತಿಕ್ ರೋಶನ್ ರ ಮುಂದಿನ ಚಿತ್ರದ ಫಸ್ಟ್ ಲುಕ್ ಇಂದು ಅನಾವರಣಗೊಂಡಿದೆ. ತಮಿಳಿನ ಸೂಪರ್ಹಿಟ್ ಚಿತ್ರದ ರಿಮೇಕ್ನಲ್ಲಿ ಹೃತಿಕ್, ವೇದಾ ಪಾತ್ರವನ್ನು ನಿರ್ವಹಿಸಿದ್ದಾರೆ. ವೇದಾ ಪಾತ್ರಕ್ಕೆ ತಕ್ಕಂತೆ ಹೃತಿಕ್ ಕಪ್ಪು ಕುರ್ತಾ ಧರಿಸಿದ್ದಾರೆ. ಈ ಸ್ಟಿಲ್ ಯಾವುದೋ ಫೈಟ್ ದೃಶ್ಯದ ಚಿತ್ರ ಎಂದು ನೋಡಿದಾಕ್ಷಣ ತಿಳಿಯುತ್ತದೆ, ಕಪ್ಪು ಕುರ್ತಾ, ಕನ್ನಡಕ ಹಾಕಿರುವ ಹೃತಿಕ್ ಖಡಕ್ ಆಗಿ ಕಾಣಿಸಿಕೊಂಡಿದ್ದಾರೆ. ಮೂಲ ಚಿತ್ರದಲ್ಲಿ ವೇದಾ ಪಾತ್ರವನ್ನು ವಿಜಯ್ ಸೇತುಪತಿ ನಿರ್ವಹಿಸಿದ್ದಾರೆ.
ಹೃತಿಕ್ ಮಾತ್ರವಲ್ಲ ವಿಕ್ರಮ್ ವೇದಾ ಚಿತ್ರದ ಮೊಟ್ಟ ಮೊದಲ ಪೋಸ್ಟ್ ಇದಾಗಿದ್ದು, ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಪುಷ್ಕರ್-ಗಾಯತ್ರಿ ಜೋಡಿ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ರಿಲೀಸ್ ಮಾಡಿ, ಹೃತಿಕ್ ಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ. ಜೊತೆಗೆ 30ನೇ ಸೆಪ್ಟೆಂಬರ್ 2022 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ವಿಕ್ರಮ್ ವೇದಾ ರಿಲೀಸ್ ಆಗಲಿದೆ ಎಂದು ಸಿಹಿ ಸುದ್ದಿ ನೀಡಿದ್ದಾರೆ.
ಹೃತಿಕ್ ರೋಷನ್ ಅವರು ಅಕ್ಟೋಬರ್ 15, 2021, ದಸರಾದ ಶುಭ ದಿನದಂದು ವಿಕ್ರಮ್ ವೇದದ ಹಿಂದಿ ರಿಮೇಕ್ ಚಿತ್ರೀಕರಣವನ್ನು ಪ್ರಾರಂಭಿಸಿದರು. ಈ ಚಿತ್ರದಲ್ಲಿ ಹೃತಿಕ್ ರೋಷನ್ ಜೊತೆಗೆ ಸೈಫ್ ಅಲಿ ಖಾನ್ ಮತ್ತು ರಾಧಿಕಾ ಆಪ್ಟೆ ನಟಿಸಿದ್ದಾರೆ.