ರುಚಿಕರವಾದ ಅಡುಗೆ ಮಾಡಿದ ಮೇಲೆ ಆ ಪಾತ್ರೆಗಳನ್ನು ಚೆನ್ನಾಗಿ ಸ್ವಚ್ಛ ಮಾಡುವುದು ಕೂಡ ಅತಿ ಮುಖ್ಯ. ಹಾಗಂತ ಎಲ್ಲಾ ಪಾತ್ರೆಗಳನ್ನು ತೊಳೆಯುವ ವಿಧಾನ ಒಂದೇ ರೀತಿಯಿರುವುದಿಲ್ಲ.
ಆಯಾ ಪಾತ್ರೆಯನ್ನು ನಿರ್ದಿಷ್ಟ ವಸ್ತುವಿನಿಂದ ತೊಳೆದರೆ ಅದರ ಕಲೆಗಳು ಬೇಗನೆ ಹೋಗಿ ಶುಭ್ರವಾಗುತ್ತದೆ. ಪಾತ್ರೆಯ ಪರ್ಫೆಕ್ಟ್ ಸ್ವಚ್ಛತೆಗೆ ಇಲ್ಲಿವೆ ಕೆಲವು ಉಪಾಯಗಳು.
* ಹಿತ್ತಾಳೆಯ ಪಾತ್ರೆಗಳನ್ನು ಹುಣಸೆ ಹುಳಿ, ಉಪ್ಪಿನಿಂದ ಉಜ್ಜಿ ನಂತರ ಮಾಮೂಲಿ ಪುಡಿಯಿಂದ ಉಜ್ಜಿ ತೊಳೆದರೆ ಪಾತ್ರೆಗಳು ಹೊಸದರಂತೆ ಹೊಳೆಯುತ್ತವೆ. ಆಮೇಲೆ ಈ ಪಾತ್ರೆಗಳನ್ನು ಹತ್ತಿ ಬಟ್ಟೆಯಿಂದ ನೀರಿಲ್ಲದಂತೆ ಒರೆಸಿದರೆ ಪಾತ್ರೆಗಳ ಮೇಲೆ ಬೇಗ ಕಲೆಯಾಗುವುದಿಲ್ಲ.
* ಕರಕಲಾದ ಪಾತ್ರೆಯನ್ನು ಅಡುಗೆ ಸೋಡಾದಿಂದ ಉಜ್ಜಿದರೆ ಬೇಗ ಸ್ವಚ್ಛವಾಗುತ್ತದೆ. ಅದೇ ರೀತಿ ನಾನ್‌ಸ್ಟಿಕ್ ಪಾತ್ರೆಯ ಕ್ಲೀನಿಂಗ್‌ಗೆ ಲಿಕ್ವಿಡ್ ಸೋಪ್ ಹಾಗೂ ಮೃದು ಬ್ರಷ್ ಉಪಯೋಗಿಸಿ. ಕಬ್ಬಿಣದ ಪಾತ್ರೆ ತೊಳೆಯಲು ಸ್ವಲ್ಪ ಹುಣಸೆ ಹಣ್ಣು ಬಳಸಿ. ಮಣ್ಣಿನ ಪಾತ್ರೆ ತೊಳೆಯಲು ಒಲೆಯ ಬೂದಿ ಒಳ್ಳೆಯದು. ಸ್ಟೀಲ್‌ನ ಗ್ಯಾಸ್ ಸ್ಟವ್ ಅನ್ನು ತೆಂಗಿನ ನಾರು ಮತ್ತು ಗ್ಲಾಸ್ ಟಾಪ್‌ನ ಗ್ಯಾಸ್ ಸ್ಟವ್ ಅನ್ನು ಬಟ್ಟೆಯಿಂದ ತೊಳೆದರೆ ಅವು ಹೊಸದರಂತೆ ಹೊಳೆಯುತ್ತವೆ. ಚಹಾ, ಕಾಫಿಯ ಕಲೆಗಳಿರುವ ಗಾಜಿನ ಕಪ್‌ಗಳನ್ನು ಹರಳುಪ್ಪಿನಿಂದ ಉಜ್ಜಿದರೆ ಚೆನ್ನಾಗಿ ಸ್ವಚ್ಛವಾಗುತ್ತವೆ.
* ಬೆಳ್ಳಿ ವಸ್ತುಗಳನ್ನು ನುಣುಪಾದ ಟೂತ್ ಪೌಡರ್ ಅಥವಾ ವಿಭೂತಿಯಿಂದ ತಿಕ್ಕಿ ಬಟ್ಟೆಯಿಂದ ಒರೆಸಿದರೆ ಹೊಳಪು ಹಾಗೆಯೇ ಉಳಿಯುತ್ತದೆ. ಈ ವಸ್ತುಗಳು ಜಿಡ್ಡಾಗಿದ್ದರೆ ಮೊದಲು ಬಟ್ಟೆಯಿಂದ ಸ್ವಚ್ಛ ಮಾಡಿ. ಥರ್ಮಾಸ್ ಪ್ಲಾಸ್ಕ್‌ನ ಒಳ ಭಾಗವನ್ನು ಬ್ರಷ್‌ಗೆ ಹತ್ತಿಯ ಬಟ್ಟೆ ಸುತ್ತಿ ಸ್ವಚ್ಛ ಮಾಡಿ.
* ನೀರಿನ ಬಾಟಲ್, ಪ್ಲಾಸ್ಕ್‌ನಂತಹ ವಸ್ತುಗಳನ್ನು ತೊಳೆದ ನಂತರ ಒಳಗಡೆ ಪೂರ್ತಿ ಒಣಗುವವರೆಗೂ ಮುಚ್ಚಳ ತೆಗೆದು ಗಾಳಿಯಾಡುವಂತೆ ಇಡಿ. ಫ್ರಿಜ್‌ನೊಳಗಿಂದ ವಾಸನೆ ಬರುತ್ತಿದ್ದರೆ ಅದರೊಳಗೆ ಇದ್ದಿಲ ಚೂರು ಇಡಿ.
* ಬಿದರಿನ ಬುಟ್ಟಿಯನ್ನು ಬಿಸಿಲಿಗಿಟ್ಟು ನಂತರ ಟೂತ್ ಬ್ರಷ್‌ನಿಂದ ಬ್ರಷ್ ಮಾಡಿದರೆ ಅದರಲ್ಲಿರುವ ಸಣ್ಣ ಜಿರಳೆ ಮತ್ತು ಅದರ ಮೊಟ್ಟೆಗಳು ನಾಶವಾಗುತ್ತದೆ. ಜಿಡ್ಡಿರುವ ಪಾತ್ರೆಗಳನ್ನು ಬಿಸಿ ನೀರಿನಲ್ಲಿ ಇಟ್ಟು ನಂತರ ಸ್ವಚ್ಛ ಮಾಡಿ. ಅಡುಗೆ ಮನೆಯಲ್ಲಿ ಜಿಡ್ಡಾದ ಸ್ಥಳವನ್ನು ಅಡುಗೆ ಸೋಡಾ ಹಾಕಿ ಉಜ್ಜಿ.
* ಬಚ್ಚಲು ಮನೆಯ ಮ್ಯಾಟ್, ಅಡುಗೆ ಮನೆಯ ಟವೆಲ್‌ಗಳನ್ನು ತೊಳೆದ ನಂತರ ಸ್ವಲ್ಪ ಡೇಟಾಲ್ ಹಾಕಿದ ನೀರಿನಲ್ಲಿ ಅದ್ದಿ ಹಿಂಡಿ. ಅಡುಗೆ ಎಣ್ಣೆಯ ಬಾಟಲಿಗೆ ಉಣ್ಣೆಯ ಚೀಲ ಹಾಕಿದರೆ ಬಾಟಲಿ ಜಾರುವುದಿಲ್ಲ.