ಸುಂದರವಾದ ನೀಳ ಕೂದಲನ್ನು ಹೊಂದಬೇಕೆಂಬ ಬಯಕೆ ಯಾವ ಮಹಿಳೆಗೆ ಇರುವುದಿಲ್ಲ ಹೇಳಿ. ಆದರೆ ತಲೆಗೆ ಸ್ನಾನ ಮಾಡಿದ ಬಳಿಕ ಸಿಕ್ಕು ಬಿಡಿಸುವ ವೇಳೆಗೆ ಅರ್ಧ ಕೂದಲು ಬಾಚಣಿಗೆಯಲ್ಲೇ ಬಂದಿರುವುದನ್ನು ಕಂಡು ಬೇಸರವಾಗುವುದು ಸಹಜ.
ಕೂದಲಿನ ಸಿಕ್ಕು ಬಿಡಿಸುವಾಗ ಅಗಲವಾದ ಹಲ್ಲಿನ ಬಾಚಣಿಗೆಯನ್ನು ಬಳಸಲು ಮರೆಯದಿರಿ. ಒದ್ದೆ ಕೂದಲನ್ನು ಬಾಚುವುದರಿಂದ ಕೂದಲ ಬುಡ ಸಡಿಲಗೊಂಡು ಬಹುಬೇಗ ಕೂದಲು ಉದುರಲು ಕಾರಣವಾಗುತ್ತದೆ.
ಬಾಚಣಿಗೆಯಿಂದ ಒದ್ದೆ ಕೂದಲನ್ನು ಬಾಚುವ ಬದಲು ಒಣಗಿದ ಕಾಟನ್ ಬಟ್ಟೆಯಿಂದ ಕೂದಲನ್ನು ಮೃದುವಾಗಿ ಒರೆಸಿ. ಗಾಳಿಗೆ ಹರವಿ ಹಾಕಿ ಒಣಗಿಸಿ. ಇದರಿಂದ ಕೂದಲು ಉದುರುವ ಪ್ರಮಾಣವೂ ಕಡಿಮೆಯಾಗುತ್ತದೆ.
ಅಲೋವೇರಾ ಮಿಶ್ರಿತ ಹೇರ್ ಸ್ಪ್ರೇ ಹಾಕಿಕೊಳ್ಳಿ. ಇದರಿಂದ ಕೂದಲು ಸಿಕ್ಕಾಗುವುದಿಲ್ಲ. ಈ ಸ್ಪ್ರೇಯನ್ನು ಮನೆಯಲ್ಲೇ ತಯಾರಿಸಬಹುದು. ಒಂದು ಬಾಟಲಿಗೆ ನೀರು ಹಾಕಿ ಒಂದು ಚಮಚ ಅಲೋವೇರಾ ಜೆಲ್ ಹಾಕಿ ಚೆನ್ನಾಗಿ ಕುಲುಕಿ. ಕೂದಲಿನ ಕೆಳಭಾಗಕ್ಕೆ ಇದನ್ನು ಸಿಂಪಡಿಸಿ. ನಿಧಾನಕ್ಕೆ ಬಾಚಿ. ಈಗ ಕೂದಲು ಸಿಕ್ಕಾಗುವುದಿಲ್ಲ.