
ಅರೇಂಜ್ ಮ್ಯಾರೇಜ್ ಗಳನ್ನು ಹಿರಿಯರೇ ಮುಂದೆ ನಿಂತು ಮಾಡಿಸುವುದರಿಂದ ಗಂಡು – ಹೆಣ್ಣಿಗೆ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಲು ಹೆಚ್ಚು ಸಮಯ ಸಿಕ್ಕಿರುವುದಿಲ್ಲ. ಹಾಗಾಗಿ ಮದುವೆಯ ಬಳಿಕ ಇಬ್ಬರು ಜೊತೆಗೆ ಕುಳಿತು ಮಾತನಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ.
ಸಂಗಾತಿಯೊಂದಿಗೆ ಸಂತಸದಿಂದ ಇರಬೇಕು ಎಂಬ ಕಾರಣಕ್ಕೆ ಕೇವಲ ಖುಷಿಯ ಸಂಗತಿಯನ್ನಷ್ಟೇ ಹಂಚಿಕೊಳ್ಳದಿರಿ. ನಿಮ್ಮ ಸಮಸ್ಯೆಗಳನ್ನೂ ಹೇಳಿಕೊಳ್ಳಿ. ಹೃದಯ ಬಿಚ್ಚಿ ನೀವು ಎಲ್ಲವನ್ನೂ ಹೇಳಿಕೊಳ್ಳಬಹುದಾದ ಏಕೈಕ ಜೀವ ಅದು ಎಂಬುದನ್ನು ಮರೆಯದಿರಿ. ಏಕಾಂಗಿಯಾಗಿ ನೋವು ಅನುಭವಿಸುವುದನ್ನು ಬಿಟ್ಟುಬಿಡಿ.
ನೀವು ಭಾವನೆಗಳನ್ನು ಸರಿಯಾಗಿ ಹಂಚಿಕೊಳ್ಳದಿದ್ದರೆ ಏನಾದರೂ ಸಮಸ್ಯೆ ಇದೆಯೆಂದೇ ಅರ್ಥ. ಹಂಚಿಕೊಳ್ಳದ ಹೊರತು ಹತ್ತಿರವಾಗಲು ಸಾಧ್ಯವಿಲ್ಲ. ಹಣದ ವಿಚಾರಕ್ಕೆ ಮನಸ್ಸುಗಳು ಒಡೆಯದಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರದಿದ್ದರೂ ಅದರಲ್ಲೇ ಹೊಂದಾಣಿಕೆ ಮಾಡಿಕೊಂಡು ಹೋಗುವುದನ್ನು ಕಲಿಯಿರಿ. ಸಂಗಾತಿಯನ್ನು ಅರ್ಥ ಮಾಡಿಕೊಳ್ಳಿ. ನಿಮ್ಮನ್ನೂ ಅವರಿಗೆ ಅರ್ಥ ಮಾಡಿಸಿ.
ಭಯ ಪಡದಿರಿ. ಅವರಿಗೂ ನಿಮ್ಮಂತೆ ಹಲವು ಗೊಂದಲಗಳಿರುತ್ತವೆ ಎಂಬುದನ್ನು ಅರಿತುಕೊಳ್ಳಿ. ಆರೋಗ್ಯ ಸಂಬಂಧಿ ಸಮಸ್ಯೆಗಳಿದ್ದರೆ ಹೇಳಿಕೊಳ್ಳಿ. ಇಬ್ಬರೂ ಜೊತೆಯಾಗಿ ಸಂಭಾಳಿಸಿಕೊಂಡು ಹೋಗುವುದನ್ನು ಕಲಿತರೆ ಬಾಳು ರಸಮಯವಾಗಿರುತ್ತದೆ.