ಅಡುಗೆ ಮನೆಯಲ್ಲಿ ಎಣ್ಣೆಯನ್ನು ಸಂಗ್ರಹಿಸಿಡುವುದು ಸವಾಲಿನ ಮಾತ್ರವಲ್ಲ ಕಷ್ಟದ ಕೆಲಸವೂ ಹೌದು. ಅದರಲ್ಲೂ ಮನೆಯಲ್ಲಿ ಮಕ್ಕಳಿದ್ದರೆ ಅವರ ಕೈಗೂ ಸಿಗದಂತೆ, ದೀರ್ಘ ಕಾಲ ಕೆಡದಂತೆ ಸಂಗ್ರಹಿಸಿಡುವುದು ಮುಖ್ಯ.
ಮಳಿಗೆಯಿಂದ ತಂದ ಅಡುಗೆ ಎಣ್ಣೆಯನ್ನು ಪ್ಲಾಸ್ಟಿಕ್ ಪ್ಯಾಕೆಟ್ ನಲ್ಲೇ ಇಟ್ಟರೆ ಅದು ಕೆಟ್ಟು ಹೋಗುವ ಇಲ್ಲವೇ ಅಡ್ಡ ವಾಸನೆ ಬೀರುವ ಸಂದರ್ಭಗಳೇ ಹೆಚ್ಚು. ಅದನ್ನು ತಪ್ಪಿಸಲು ನೀವು ಈ ಬಾಟಲ್ ಗಳನ್ನು ಫ್ರಿಜ್ ನಲ್ಲಿ ಇಡಬಹುದು. ಕೆಲವೊಮ್ಮೆ ಇದರ ಪ್ರಮಾಣ ಹೆಚ್ಚಿದ್ದರೆ ಫ್ರಿಜ್ ನಲ್ಲಿ ಸಂಗ್ರಹಿಸಿಡುವುದು ಸಾಧ್ಯವಾಗದು.
ಸೂರ್ಯಕಾಂತಿ ಎಣ್ಣೆ ಹಾಗೂ ಎಳ್ಳೆಣ್ಣೆ ಸೂಕ್ಷ್ಮವಾದುದರಿಂದ ಇದನ್ನು ಫ್ರಿಜ್ ನಲ್ಲಿ ಇಡುವುದೇ ಒಳ್ಳೆಯದು. ಇದರ ಶುಚಿ ಹಾಗೂ ರುಚಿಯನ್ನು ಉಳಿಸಿಕೊಳ್ಳಬೇಕಿದ್ದರೆ ನೀವು ಗಾಜು ಇಲ್ಲವೇ ಲೋಹದ ಡಬ್ಬಿಯನ್ನು ಆಯ್ಕೆ ಮಾಡಿ. ಫ್ರಿಜ್ ನಲ್ಲಿಡಲು ಸಾಧ್ಯವಾಗದೆ ಹೋದರೂ ತಂಪು ಪ್ರದೇಶದಲ್ಲಿಡಿ. ಬಿಸಿಲಿನಿಂದ ದೂರವಿಡಿ.
ಬೆಳಕು ಹೆಚ್ಚು ಬೀಳದ ಜಾಗದಲ್ಲಿಟ್ಟರೆ ದೀರ್ಘ ಕಾಲ ಎಣ್ಣೆ ತನ್ನ ತಾಜಾತನ ಉಳಿಸಿಕೊಳ್ಳುತ್ತದೆ. ಎಣ್ಣೆ ಕೊಳ್ಳುವ ವೇಳೆ ಅದರ ಅವಧಿ ದಿನಾಂಕವನ್ನು ಗಮನಿಸಿ.
ನಿಮಗೆಷ್ಟು ಬೇಕೋ ಅಷ್ಟೇ ಪ್ರಮಾಣದ ಪ್ಯಾಕೆಟ್ ಕೊಳ್ಳಿ. ದೀರ್ಘ ಕಾಲ ಸಂಗ್ರಹಿಸಿಡುವ ಬದಲು ಹೊಸದನ್ನು ಕೊಳ್ಳುವುದೇ ನಿಮ್ಮ ಆಯ್ಕೆಯಾಗಲಿ.