ಮೊಬೈಲ್ ಬಂದ ಮೇಲೆ ಬಹಳಷ್ಟು ಕೆಲಸಗಳು ಸುಲಭವಾಗಿದೆಯಾದರೂ ಖಾಸಗಿತನವೆಂಬುದು ಸಂಪೂರ್ಣವಾಗಿ ಹೊರಟುಹೋಗಿದೆ. ಮೊಬೈಲ್ಗಳಲ್ಲಿ ನಾವು ಅಳವಡಿಸಿಕೊಳ್ಳುವ ಬಹಳಷ್ಟು ಅಪ್ಲಿಕೇಶನ್ ಗಳು ನಾವು ಎಲ್ಲಿ ಹೋಗುತ್ತೇವೆ, ಏನನ್ನು ಬಯಸುತ್ತೇವೆ ಎಂಬುದರ ಮೇಲೆಲ್ಲಾ ನಿಗಾ ಇಡುತ್ತವೆ.
ನೀವು ಗೂಗಲ್ ನಲ್ಲಿ ಯಾವುದಾದರೂ ಒಂದು ವಸ್ತುವಿನ ಕುರಿತು ಸರ್ಚ್ ಮಾಡಿದರೆ ಅದನ್ನು ಕ್ಷಣಾರ್ಧದಲ್ಲಿ ಗ್ರಹಿಸುವ ಆಪ್ ಗಳು ಅದಕ್ಕೆ ಸಂಬಂಧಿಸಿದ ಜಾಹೀರಾತುಗಳನ್ನೇ ಬಿತ್ತರಿಸುತ್ತವೆ. ಇನ್ನು ಲೊಕೇಶನ್ ಟ್ರ್ಯಾಕ್ ಮಾಡುವ ಆಪ್ ಗಳು ನಮಗೆ ಬೇಡವೆಂದರೂ ಸಹ ಆ ಸ್ಥಳದ ಸುತ್ತಮುತ್ತಲಿನ ವಾಣಿಜ್ಯ ಜಾಹೀರಾತುಗಳನ್ನು ಸ್ಕ್ರೀನ್ ಮೇಲೆ ಬರುವಂತೆ ಮಾಡುತ್ತವೆ.
ಅದರಲ್ಲೂ ಸೋಶಿಯಲ್ ಮೀಡಿಯಾ ಆಪ್ ಗಳು ಲೊಕೇಶನ್ ಟ್ರ್ಯಾಕ್ ಮಾಡುವುದರಲ್ಲಿ ಎತ್ತಿದ ಕೈ. ಆದರೆ ಕೆಲವೊಂದು ಆಪ್ ಗಳಿಗೆ ನಾವೇ ಲೊಕೇಶನ್ ಶೇರ್ ಮಾಡಬೇಕಾಗುತ್ತದೆ. ಉದಾಹರಣೆಗೆ ಓಲಾ, ಉಬರ್ ಮೊದಲಾದವು ಲೊಕೇಶನ್ ಶೇರಿಂಗ್ ಮೇಲೆಯೇ ಕಾರ್ಯ ನಿರ್ವಹಿಸುತ್ತವೆ. ಚಾಲಕರು ನಾವಿರುವ ಸ್ಥಳವನ್ನು ಗುರುತಿಸಲು ಇದು ನೆರವಾಗುತ್ತದೆ. ಅಲ್ಲದೆ ನೆಟ್ ಫ್ಲಿಕ್ಸ್, ಪ್ರೈಮ್ ಮೊದಲಾದ ಸ್ಟ್ರೀಮಿಂಗ್ ಆಪ್ ಗಳು ಸಹ ಲೊಕೇಶನ್ ಟ್ರ್ಯಾಕ್ ಮಾಡುತ್ತವೆ. ಇದೆಲ್ಲವುದಕ್ಕೂ ಕಡಿವಾಣ ಹಾಕಲು ಸಾಧ್ಯ.
ನಿಮ್ಮ ಆಂಡ್ರಾಯ್ಡ್ ಫೋನ್ನಲ್ಲಿ ಮೊದಲಿಗೆ ಸೆಟ್ಟಿಂಗ್ಸ್ ಗೆ ಹೋಗಿ.
ಬಳಿಕ ಆಪ್ಸ್ ಅಂಡ್ ನೋಟಿಫಿಕೇಶನ್ ಮೇಲೆ ಕ್ಲಿಕ್ ಮಾಡಿ.
ನಂತರ ಆಪ್ ಪರ್ಮಿಷನ್ಸ್ ಆಯ್ಕೆ ಮಾಡಿಕೊಳ್ಳಿ.
ಲೊಕೇಶನ್ ಆಯ್ಕೆ ಸಿಗುವವರೆಗೂ ಸ್ಕ್ರಾಲ್ ಮಾಡಿ.
ಇಲ್ಲಿ ಯಾವ್ಯಾವ ಅಪ್ಲಿಕೇಶನ್ಗಳು ನಿಮ್ಮ ಲೋಕೇಶನ್ ಟ್ರ್ಯಾಕ್ ಮಾಡುತ್ತಿವೆ ಎಂಬುದರ ಮಾಹಿತಿ ಸಿಗುತ್ತದೆ. ಅದರಲ್ಲಿ ನಾಲ್ಕು ಆಯ್ಕೆಗಳಿರುತ್ತವೆ.
ಎಲ್ಲಾ ಸಮಯದಲ್ಲೂ ಟ್ರ್ಯಾಕ್ ಮಾಡುವುದು, ಬಳಕೆಯಲ್ಲಿರುವಾಗ ಮಾತ್ರ ಟ್ರ್ಯಾಕ್ ಮಾಡುವುದು, ಅನುಮತಿ ಕೇಳಿದ ಬಳಿಕವೇ ಟ್ರ್ಯಾಕ್ ಮಾಡುವುದು ಮತ್ತು ಟ್ರ್ಯಾಕ್ ಮಾಡುವುದನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು.
ಯಾವ್ಯಾವ ಆಪ್ ಗಳಿಗೆ ಯಾವ ರೀತಿಯ ಪರ್ಮಿಷನ್ ನೀಡಬೇಕೆಂಬುದನ್ನು ನೀವು ಈ ಮೂಲಕ ನಿರ್ಧರಿಸಬಹುದಾಗಿದೆ. ಐ ಓ ಎಸ್ ಫೋನ್ಗಳಲ್ಲೂ ಬಹುತೇಕ ಇದೇ ರೀತಿ ಸೆಟ್ಟಿಂಗ್ಸ್ ಮಾಡಬಹುದಾಗಿದೆ.