ಈಗಿನ ಜಗತ್ತಿನಲ್ಲಿ ‘ಸ್ಟೇ ಫಿಟ್’ ಮಂತ್ರ ಜಪಿಸದವರೇ ಇಲ್ಲ. ಬೊಜ್ಜು ಹೊಟ್ಟೆ, ದಪ್ಪನೆಯ ಗಲ್ಲ, ಅಗಲವಾದ ತೊಡೆಗಳು, ಮೈಕಟ್ಟು ಕಾಣದಂತೆ ಹೇಗೇಗೋ ಊದಿಕೊಂಡಿರುವ ವ್ಯಕ್ತಿಗಳನ್ನು ಬಹಳ ಅಚ್ಚರಿಯಿಂದಲೇ ಕಾಣಲಾಗುತ್ತಿದೆ. ಬೆಳಗ್ಗೆ ಎದ್ದ ಕೂಡಲೇ ಬಹುತೇಕರ ಮೊದಲ ಕೆಲಸ ವಾಕಿಂಗ್, ಯೋಗ, ವ್ಯಾಯಾಮ, ಜಿಮ್‌ಗೆ ದೌಡು.
ಹಾಗಾಗಿಯೇ ರಸ್ತೆಗೆ ನಾಲ್ಕರಂತೆ ಜಿಮ್ ಕೇಂದ್ರಗಳು ಕೂಡ ತಲೆ ಎತ್ತಿವೆ. ಹಾಗಿದ್ದೂ ಎಲ್ಲ ಜಿಮ್‌ಗಳಲ್ಲಿ ಜನ ತುಂಬಿಕೊಂಡಿರುತ್ತಾರೆ. ಕೊರೊನಾ ಸಮಯ ಬೇರೆ ಎಂದು ಚಿಂತೆಯಲ್ಲಿ ಮುಳುಗಿರುವ ನಿಮಗೆ, ಮನೆಯಲ್ಲೇ ಕನಿಷ್ಠ ಸಾಧನಗಳ ಜಿಮ್ ಸಿದ್ಧಪಡಿಸಿಕೊಳ್ಳಲು ಸಲಹೆಗಳು ಇಲ್ಲಿದೆ.
‘ಆರ್ಥಿಕ’ ಸಮಸ್ಯೆಗೆ ನಿಮ್ಮಲ್ಲೇ ಇದೆ ಪರಿಹಾರ
ದೈಹಿಕ ವ್ಯಾಯಾಮಕ್ಕೆ ಬಹಳ ಅಗತ್ಯವಾಗಿ ಎಲ್ಲ ಭಾಗಗಳಿಗೆ ಕಸರತ್ತು ನೀಡಲು ಬೇಕಿರುವ ಐದು ಸಾಧನಗಳನ್ನು ನಿಮ್ಮ ಮನೆಗೆ ತಂದಿಟ್ಟುಕೊಂಡರೆ ಸಾಕು, ಖಾಸಗಿ ಜಿಮ್ ರೆಡಿ….
ಆ ಐದು ಸಾಧನಗಳೆಂದರೆ, ಟ್ರೆಡ್‌ಮಿಲ್, ಎಕ್ಸರ್‌ಸೈಸ್ ಬೈಕ್, ರೋವಿಂಗ್ ಮಷೀನ್, ಡಂಬೆಲ್ಸ್, ಫಿಟ್‌ನೆಸ್ ಆ್ಯಪ್‌ಗಳು.
ಟ್ರೆಡ್‌ಮಿಲ್ ಮತ್ತು ಎಕ್ಸರ್‌ಸೈಸ್ ಬೈಕ್ ಕಾರ್ಡಿಯೋ ವ್ಯಾಯಾಮಕ್ಕೆ ಸಹಕಾರಿ. ದೇಹದ ಕೆಳಗಿನ ಭಾಗದ ಸ್ನಾಯುಗಳಿಗೂ ಬಹಳ ಉತ್ತಮ ವ್ಯಾಯಾಮ ನೀಡುತ್ತದೆ.
ರೋವಿಂಗ್ ಮಷೀನ್‌ನಿಂದ ಕಾಲುಗಳು, ತೋಳುಗಳು, ಬೆನ್ನು, ಎದೆಗೆ ಉತ್ತಮ ವ್ಯಾಯಾಮ ಸಿಗುತ್ತದೆ.
ಇನ್ನು ಎಲ್ಲರ ಅಚ್ಚುಮೆಚ್ಚಿನ ಡಂಬಲ್ಸ್‌ಗಳು ಮಾಂಸಗಳ ಬಲವರ್ಧನೆಗೆ ಸಹಕಾರಿ.
ಇವಕ್ಕೆಲ್ಲ ಮಾರ್ಗದರ್ಶಿ ಎಂಬಂತೆ ಆಧುನಿಕ ತಂತ್ರಜ್ಞಾನದ ಫಿಟ್‌ನೆಸ್ ಆ್ಯಪ್ ಜತೆಗಿದ್ದರೆ ನಿಮ್ಮ ಫಿಟ್‌ನೆಸ್ ಕಾರ್ಯಕ್ರಮ ಸಿದ್ಧಗೊಂಡಂತೆಯೇ ಸರಿ.