ತ್ವರಿತ ಸಂದೇಶ ಕಳುಹಿಸಲು ಅತ್ಯಂತ ಜನಪ್ರಿಯ ಪ್ಲಾಟ್ಫಾರಂ ಆಗಿರುವ ವಾಟ್ಸಾಪ್ ಮೂಲಕ ನಮ್ಮ ಸಂಪರ್ಕಗಳೊಂದಿಗೆ ನಿರಂತರ ಟಚ್ನಲ್ಲಿರುವ ಕಾರಣ ಜಗತ್ತು ಚಿಕ್ಕದೆಂಬಂತೆ ಭಾಸವಾಗುತ್ತದೆ.
ಆದರೆ ಕೆಲವೊಮ್ಮೆ ನೀವು ಬಹಳಷ್ಟು ಗ್ರೂಪ್ಗಳ ಸದಸ್ಯರಾದಲ್ಲಿ ಸಂವಹನಗಳ ಮೇಲೆ ನಿಗಾ ಇಡುವುದು ಕಷ್ಟವಾಗುತ್ತದೆ. ಜೊತೆಗೆ ನೀವು ಒಮ್ಮೊಮ್ಮೆ ಏಕಕಾಲದಲ್ಲಿ ಒಂದೇ ಸಂದೇಶವನ್ನು ಗ್ರೂಪ್ಗಳಲ್ಲಿರದ ಒಂದಷ್ಟು ಮಂದಿಗೆ ಕಳುಹಿಸಬೇಕಾಗುತ್ತದೆ.
ಇಂಥ ಸಂದರ್ಭದಲ್ಲಿ ನೀವು ವಾಟ್ಸಾಪ್ನ ಬ್ರಾಡ್ಕಾಸ್ಟ್ ಫೀಚರ್ ಅನ್ನು ನಂಬಿಕೊಳ್ಳಬಹುದಾಗಿದೆ. ಯಾವುದೇ ಗ್ರೂಪ್ ಸೃಷ್ಟಿಸಿದೇ ಒಮ್ಮೆಲೇ ಬಹುಮಂದಿಗೆ ಸಂದೇಶ ಕಳುಹಿಸಲು ಈ ಫೀಚರ್ ನಿಮಗೆ ಸಹಾಯ ಮಾಡಲಿದೆ.
ಏನಿದು ಬ್ರಾಡ್ಕಾಸ್ಟ್ ಫೀಚರ್ ?
ಬಳಕೆದಾರನಿಗೆ ಏಕಕಾಲದಲ್ಲಿ ಬಹುಸಂಪರ್ಕಗಳಿಗೆ ಸಂದೇಶ ಕಳುಹಿಸಲು ನೆರವಾಗುತ್ತದೆ ಈ ಫೀಚರ್. ಸಂದೇಶ ಸ್ವೀಕರಿಸಿದವರ ಪಟ್ಟಿಯನ್ನು ಸೇವ್ ಮಾಡಿಕೊಳ್ಳುವ ಬ್ರಾಡ್ಕಾಸ್ಟ್ ಪಟ್ಟಿಗಳ ಮುಲಕ, ಪುನಃ ಈ ಹೆಸರುಗಳನ್ನು ಪ್ರತ್ಯೇಕವಾಗಿ ಸೆಲೆಕ್ಟ್ ಮಾಡುವ ಅಗತ್ಯವಿಲ್ಲದೇ ಸಂದೇಶಗಳನ್ನು ಮತ್ತೆ ಮತ್ತೆ ಇವರಿಗೆ ಕಳುಹಿಸಹುದು. ಅನಗತ್ಯವಾಗಿ ಗ್ರೂಪ್ಗಳನ್ನು ಸೃಷ್ಟಿಸುವ ಅಗತ್ಯವನ್ನು ಈ ಫೀಚರ್ ತಪ್ಪಿಸುತ್ತದೆ.
ನಿಮ್ಮ ಫೋನ್ಬುಕ್ನಲ್ಲಿ ಸ್ಟೋರ್ ಆಗಿರುವ ಸಂಪರ್ಕಗಳ ಪೈಕಿ ಗರಿಷ್ಠ 256 ಸಂಪರ್ಕಗಳಿಗೆ ಬ್ರಾಡ್ಕಾಸ್ಟ್ ಮೂಲಕ ಸಂದೇಶ ಕಳುಹಿಸಬಹುದಾಗಿದೆ.
ಬ್ರಾಡ್ಕಾಸ್ಟ್ ಪಟ್ಟಿ ಸಿದ್ಧಪಡಿಸುವುದು ಹೇಗೆ ?
1. ವಾಟ್ಸಾಪ್ ಅಪ್ಲಿಕೇಶನ್ ತೆರೆದು ಮೇಲೆ ಬಲಗಡೆ ಇರುವ ಮೂಲೆಯಲ್ಲಿರುವ ಮೂರು ಚುಕ್ಕಿಗಳಿರುವ ಮೆನು ಮೇಲೆ ಟ್ಯಾಪ್ ಮಾಡಿ.
2. ಈಗ ನೀವು ಸೇರಿಸಲು ಬಯಸುವ ಸಂಪರ್ಕಗಳನ್ನು ಆಯ್ಕೆ ಮಾಡಿ.
3. ಇದಾದ ಬಳಿಕ ನಿಮ್ಮ ಬ್ರಾಡ್ಕಾಸ್ಟ್ ಪಟ್ಟಿ ಸಿದ್ಧವಿದೆ ಎಂದು ಖಾತ್ರಿ ಪಡಿಸಲು ಚೆಕ್ ಮಾರ್ಕ್ ಮೇಲೆ ಟ್ಯಾಪ್ ಮಾಡಿ.
ಬ್ರಾಡ್ಕಾಸ್ಟ್ ಮೂಲಕ ನೀವು ಕಳುಹಿಸುವ ಸಂದೇಶವು, ಯಾರು ನಿಮ್ಮ ಸಂಪರ್ಕವನ್ನು ತಮ್ಮ ಫೋನ್ಬುಕ್ಗಳಲ್ಲಿ ಇಟ್ಟುಕೊಂಡಿದ್ದಾರೋ ಅವರೆಲ್ಲರಿಗೂ ತಲುಪುತ್ತದೆ. ಸ್ವೀಕೃತಿದಾರರು ಈ ಸಂದೇಶಗಳನ್ನು ಸಾಮಾನ್ಯ ಸಂದೇಶದಂತೆ ಸ್ವೀಕರಿಸುತ್ತಾರೆ. ಅವರು ಪ್ರತಿಕ್ರಿಯಿಸಿದಲ್ಲಿ ನಿಮ್ಮ ಸ್ಕ್ರೀನ್ನಲ್ಲೂ ಸಹ ಸಾಮಾನ್ಯ ಸಂದೇಶದಂತೆ ಬರುತ್ತದೆ.
ಇದೇ ರೀತಿ, ನಿಮ್ಮ ಅಗತ್ಯಕ್ಕೆ ತಕ್ಕಂತೆ ಬೇಡವಾದ/ಬೇಕಾದ ಸಂಪರ್ಕಗಳನ್ನು ಬ್ರಾಡ್ಕಾಸ್ಟ್ ಪಟ್ಟಿಯಿಂದ ತೆಗೆದು/ಸೇರಿಸಬಹುದಾಗಿದೆ.