ಕೊರೊನಾ ಇಡೀ ವಿಶ್ವದ ಚಿತ್ರಣವನ್ನೇ ಬದಲಿಸಿದೆ.ಕೊರೊನಾದಿಂದಾಗಿ ಮಕ್ಕಳಿಗೆ ಶಾಲೆಯಿಲ್ಲ. ದಿನದ 24 ಗಂಟೆ ಗೋಡೆಗಳ ಮಧ್ಯೆಯೇ ಇರುವ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯ ಹಾಳಾಗ್ತಿದೆ. ಮನೆಯಿಂದ ಮಕ್ಕಳನ್ನು ಹೊರಗೆ ಕಳುಹಿಸಲು ಭಯ. ಮಕ್ಕಳು ಮನೆಯಲ್ಲಿ ಶಾಂತವಾಗಿರಲಿ ಎನ್ನುವ ಕಾರಣಕ್ಕೆ ಅವರ ಕೈಗೆ ಮೊಬೈಲ್ ನೀಡಲಾಗ್ತಿದೆ. ಕೈನಲ್ಲಿ ಮೊಬೈಲ್ ಹಿಡಿಯುವ ಮಕ್ಕಳು ಮೊಬೈಲ್ ವೀಕ್ಷಣೆಯನ್ನು ಚಟ ಮಾಡಿಕೊಂಡಿದ್ದಾರೆ.
ಆರಂಭದಲ್ಲಿ ಪಾಲಕರಿಗೂ ಹಿತವೆನಿಸುವ ಮಕ್ಕಳ ಕೈನಲ್ಲಿರುವ ಮೊಬೈಲ್ ಬರ್ತಾ ಬರ್ತಾ ಹಿಂಸೆಯಾಗಿದೆ. ಮಕ್ಕಳ ಮೊಬೈಲ್ ಚಟ ಬಿಡಿಸುವುದು ಕಷ್ಟವಾಗಿದೆ. ಮಕ್ಕಳನ್ನು ಗದರಿಸಿ, ಹೊಡೆಯದೆ ಮಕ್ಕಳಿಗೆ ಮೊಬೈಲ್ ಬಳಕೆಯಿಂದಾಗುವ ಅನಾಹುತದ ಬಗ್ಗೆ ತಿಳಿಸಬೇಕಿದೆ. ಪೋಷಕರಾಗಿ ಅವರಿಗೆ ಅವರದ್ದೇ ಆದ ರೀತಿಯಲ್ಲಿ ಸರಿ ಮತ್ತು ತಪ್ಪುಗಳ ನಡುವಿನ ವ್ಯತ್ಯಾಸ ತಿಳಿಸಬೇಕು. ಫೋನ್‌ನಿಂದ ದೂರವಿರಿಸಲು ಬೇರೆ-ಬೇರೆ ಚಟುವಟಿಕೆಗಳಲ್ಲಿ ಅವರನ್ನ ತೊಡಗಿಸಿ.
ಅಡುಗೆ ಕೆಲಸದಿಂದ ಹಿಡಿದು ತೋಟಗಾರಿಕಾ ಕೆಲಸದವರೆಗೆ ಎಲ್ಲ ಕೆಲಸಗಳಲ್ಲಿ ಅವರನ್ನೂ ತೊಡಗಿಸಿಕೊಳ್ಳಿ. ಇಂತಹ ಕೆಲಸಗಳನ್ನ ಮಕ್ಕಳಿಗೆ ಕೊಟ್ಟರೆ ಅವರು ಫೋನ್ ಮರೆಯುತ್ತಾರೆ. ಮಕ್ಕಳ ಜೊತೆ ಸೇರಿ ಮನೆಯಲ್ಲಿ ಪುಟ್ಟ ಉದ್ಯಾನವನ ನಿರ್ಮಿಸಿ.
ನಿಮ್ಮ ಅನುಮತಿಯಲ್ಲದೆ ಮಕ್ಕಳು ಮೊಬೈಲ್ ಬಳಸ್ತಿದ್ದರೆ ಅದಕ್ಕೆ ಪಾಸ್ವರ್ಡ್ ಹಾಕಿ. ಆಗ ನಿಯಂತ್ರಣ ನಿಮ್ಮ ಕೈನಲ್ಲಿರುತ್ತದೆ. ಇದರಿಂದ ಮಕ್ಕಳು ಸುಲಭವಾಗಿ ಮೊಬೈಲ್ ಬಳಸೋದು ಕಷ್ಟವಾಗುತ್ತೆ.
ಮಕ್ಕಳು ಜೊತೆಯಲ್ಲಿರುವಾಗ ನೀವೂ ಅನವಶ್ಯಕ ಫೋನ್ ಬಳಕೆ ಮಾಡಬೇಡಿ. ಊಟ ಮಾಡುವಾಗ, ತಿಂಡಿ ಸೇವನೆ ಮಾಡುವಾಗ ನೀವೂ ಫೋನ್ ಬಳಸಬೇಡಿ. ಮಕ್ಕಳಿಗೂ ಫೋನ್ ಬಳಸದಂತೆ ತಿಳಿ ಹೇಳಿ.
ಸಮಯ ಸಿಕ್ಕಾಗ ಮಕ್ಕಳ ಜೊತೆ ಆಟವಾಡಿ. ಇದ್ರಿಂದ ಇಬ್ಬರಿಗೂ ದೈಹಿಕ ವ್ಯಾಯಾಮ ಸಿಗುತ್ತದೆ. ಮಕ್ಕಳಿಗೆ ಹೊಸ ಹೊಸ ಟಾಸ್ಕ್ ನೀಡಿ. ಮಕ್ಕಳನ್ನು ಒಂದಲ್ಲ ಒಂದು ಕೆಲಸದಲ್ಲಿ ಬ್ಯುಸಿಗೊಳಿಸಿದಾಗ ಅವರು ಫೋನ್ ನಿಂದ ನಿಧಾನವಾಗಿ ದೂರ ಹೋಗುತ್ತಾರೆ.